ಬ್ರಿಸ್ಬೇನ್: ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ ಬ್ರಿಸ್ಬೇನ್‌ನಲ್ಲಿ ವಾರಾಂತ್ಯದ ಮೂರು ದಿನಗಳಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಗಾಬಾ ಮೈದಾನದಲ್ಲಿ ನಡೆಯುವ ಬಗ್ಗೆ ಅನುಮಾನಗಳು ಮತ್ತಷ್ಟು ಹೆಚ್ಚಾಗಿವೆ. ಕ್ವೀನ್ಸ್‌ಲ್ಯಾಂಡ್ ರಾಜಧಾನಿಯಲ್ಲಿ ನಿಗದಿಯಂತೆಯೇ ಜನವರಿ 15ರಿಂದ ಪಂದ್ಯವನ್ನು ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪ್ರಯತ್ನಿಸುತ್ತಿರುವ ವೇಳೆ, ಲಾಕ್‌ಡೌನ್ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ.
ಬ್ರಿಸ್ಬೇನ್‌ನಲ್ಲಿ ಹಾರ್ಡ್ ಕ್ವಾರಂಟೈನ್‌ಗೆ ಒಳಪಡಲು ಭಾರತ ತಂಡ ಹಿಂದೇಟು ಹಾಕಿದ್ದು, ಬಿಸಿಸಿಐ ಈಗಾಗಲೆ ಸಿಎಗೆ ಪತ್ರ ಬರೆದು ಇದರಿಂದ ವಿನಾಯಿತಿ ನೀಡಬೇಕೆಂದು ಕೇಳಿಕೊಂಡಿದೆ. ಹೋಟೆಲ್ ಕ್ವಾರಂಟೈನ್ ಸಿಬ್ಬಂದಿಗೆ ಬ್ರಿಟನ್‌ನ ರೂಪಾಂತರಿ ಕರೊನಾ ಕಾಣಿಸಿಕೊಂಡಿರುವ ಬೆನ್ನಲ್ಲೇ ಬ್ರಿಸ್ಬೇನ್‌ನಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಡುವೆ ಪಂದ್ಯಕ್ಕೆ ಪ್ರತಿದಿನ 36 ಸಾವಿರ ಪ್ರೇಕ್ಷಕರಿಗೆ ಅವಕಾಶ ನೀಡುವ ನಿರ್ಧಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಪ್ರವಾಸದ ಆರಂಭದಲ್ಲೇ ಐಸೋಲೇಷನ್‌ಗೆ ಒಳಗಾಗುವ ಒಪ್ಪಂದವನ್ನು ಬಿಸಿಸಿಐ ಈಗಾಗಲೆ ಪಾಲಿಸಿದೆ. ಹೀಗಾಗಿ ಪ್ರವಾಸದಲ್ಲಿ ಮತ್ತೊಮ್ಮೆ ಕ್ವಾರಂಟೈನ್‌ಗೆ ಒಳಗಾಗಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಬ್ರಿಸ್ಬೇನ್‌ನಲ್ಲಿ ಪಂದ್ಯ ನಡೆಯದಿದ್ದರೆ ಅಥವಾ ಭಾರತ ತಂಡ ಅಲ್ಲಿಗೆ ಪ್ರಯಾಣಿಸದಿದ್ದರೆ, ಸಿಡ್ನಿಯಲ್ಲೇ ಅಂತಿಮ ಪಂದ್ಯವೂ ನಡೆಯುವ ನಿರೀಕ್ಷೆ ಇದೆ.
ಹಾರ್ಡ್ ಕ್ವಾರಂಟೈನ್‌ಗೆ ಭಾರತ ಹಿಂದೇಟು
4ನೇ ಟೆಸ್ಟ್ ಪಂದ್ಯದ ವೇಳೆ ಬ್ರಿಸ್ಬೇನ್‌ನಲ್ಲಿ ಹಾರ್ಡ್ ಕ್ವಾರಂಟೈನ್‌ಗೆ ಒಳಪಡಲು ಭಾರತ ತಂಡ ನಿರಾಕರಿಸಿದೆ. ಹಾರ್ಡ್ ಕ್ವಾರಂಟೈನ್ ಮಾರ್ಗಸೂಚಿಯ ಪ್ರಕಾರ ಭಾರತ ತಂಡ ಪಂದ್ಯದ ವೇಳೆ ಪ್ರತಿ ದಿನದಾಟದ ಬಳಿಕ ಹೋಟೆಲ್ ರೂಂನಲ್ಲೇ ಬಂಧಿಯಾಗಿರಬೇಕಿದೆ. ಹೋಟೆಲ್‌ನಲ್ಲಿ ಪರಸ್ಪರ ಬೆರೆಯಲು, ಒಟ್ಟಿಗೆ ಊಟ ಮಾಡಲು ಕೂಡ ಅವಕಾಶವಿಲ್ಲ. ಆದರೆ ಇದಕ್ಕೆ ಒಪ್ಪದ ಬಿಸಿಸಿಐ, ಐಪಿಎಲ್ ಮಾದರಿಯ ಬಯೋ-ಬಬಲ್ ಬೇಕೆಂದು ಪಟ್ಟು ಹಿಡಿದಿದೆ. ಅಲ್ಲದೆ ಲಿಖಿತ ರೂಪದಲ್ಲೇ ಭರವಸೆ ನೀಡಬೇಕೆಂದು ಆಗ್ರಹಿಸಿದೆ.
ಬಿಸಿಸಿಐಗೆ ಗಾವಸ್ಕರ್ ಬೆಂಬಲ
ಕ್ವೀನ್ಸ್‌ಲ್ಯಾಂಡ್ ಸರ್ಕಾರ ತನ್ನ ರಾಜ್ಯದ ಜನರ ಹಿತ ಕಾಪಾಡಲು ಬಯಸಿರುವಂತೆಯೇ ಬಿಸಿಸಿಐ ಕೂಡ ತನ್ನ ಆಟಗಾರರ ಹಿತರಕ್ಷಣೆ ಮಾಡುತ್ತಿದೆ ಎಂದು ಮಾಜಿ ನಾಯಕ ಸುನೀಲ್ ಗಾವಸ್ಕರ್ ಹೇಳಿದ್ದಾರೆ. ಅಲ್ಲದೆ ಆಟಗಾರರು ಬ್ರಿಸ್ಬೇನ್ ಮೈದಾನದಲ್ಲಿ 10 ಗಂಟೆಗಳ ಕಾಲ ಜತೆಯಾಗಿ ಇರಲು ಅವಕಾಶ ನೀಡುತ್ತಿರುವಾಗ ಹೋಟೆಲ್‌ನಲ್ಲಿ ಯಾಕೆ ಅವರಿಗೆ ಒಟ್ಟುಗೂಡಲು ಅವಕಾಶ ನೀಡಲಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.