ಕ್ರೀಡೆ

ಸ್ಟಾರ್ಕ್​ಗೆ 24.75 ಕೋಟಿ ನಿಮ್ಗೆ ಮಾತ್ರ 55 ಲಕ್ಷ ರೂ. ಏಕೆ? ರಿಂಕು ಕೊಟ್ಟ ಉತ್ತರಕ್ಕೆ ತಲೆಬಾಗಿತು ಕ್ರೀಡಾಜಗತ್ತು!

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) 17ನೇ ಸೀಸನ್​ನಲ್ಲಿ ಕೋಲ್ಕತ್ತ ನೈಟ್​ ರೈಡರ್ಸ್​ (ಕೆಕೆಆರ್) ಚಾಂಪಿಯನ್ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಫೈನಲ್​ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡವನ್ನು ಸೋಲಿಸಿ ಕೋಲ್ಕತ್ತ ವಿಜೇತ ತಂಡವಾಗಿ ಹೊರಹೊಮ್ಮಿತು. ಈ ಮೂಲಕ ಮೂರನೇ ಬಾರಿಗೆ ಕೆಕೆಆರ್​ ಪ್ರಶಸ್ತಿ ಜಯಿಸಿದೆ. 10 ವರ್ಷಗಳ ಬಳಿಕ ಕಪ್ ಗೆದ್ದ ಖುಷಿಯಲ್ಲಿ ಆಟಗಾರರು ಮತ್ತು ಕೆಕೆಆರ್​ ಅಭಿಮಾನಿಗಳು ಸಂಭ್ರಮಿಸಿದರು.

ಕೆಕೆಆರ್ ಕಪ್ ಗೆದ್ದಾಗ ಎಲ್ಲರಿಗಿಂತ ಹೆಚ್ಚಾಗಿ ಫಿನಿಶರ್ ರಿಂಕು ಸಿಂಗ್ ಹೆಚ್ಚು ಸಂಭ್ರಮಿಸಿದರು. ಸಹ ಆಟಗಾರರನ್ನು ಅಪ್ಪಿಕೊಂಡು ಅಭಿನಂದಿಸಿದರು. ಒಳ್ಳೆಯ ಸಾಧನೆ ಮಾಡಿದ್ದೇವೆ ಎಂದು ಕೂಗಿ ಟ್ರೋಫಿಗೆ ಮುತ್ತಿಟ್ಟರು. ಇಡೀ ಕೆಕೆಆರ್ ಸಂಭ್ರಮಾಚರಣೆಯಲ್ಲಿ ರಿಂಕು ಸಿಂಗ್​ ಹೈಲೈಟ್ ಆಗಿದ್ದರು. ಆದರೆ, ಕಳೆದ ಕೆಲವು ಸೀಸನ್‌ಗಳಲ್ಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ರಿಂಕು ಸಿಂಗ್ ಅವರಿಗೆ ಐಪಿಎಲ್​ನಲ್ಲಿ ಸಿಗುತ್ತಿರುವ ಪ್ರತಿಫಲ ತಿಳಿದರೆ ಅಚ್ಚರಿಯಾಗೋದು ಖಂಡಿತ.

ಈ ಸೀಸನ್​ನಲ್ಲಿ ಆಡುವುದಕ್ಕಾಗಿ ರಿಂಕು ಸಿಂಗ್​ ಪಡೆದಿದ್ದು ಕೇವಲ 55 ಲಕ್ಷ ರೂಪಾಯಿ. ಕಳೆದ ಕೆಲವು ಸೀಸನ್​ಗಳಿಂದ ತಂಡದ ಯಶಸ್ಸಿನಲ್ಲಿ ರಿಂಕು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಉತ್ತಮ ಫಿನಿಶರ್ ಆಗಿ ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಿದ್ದಾರೆ. ಆದರೆ, ಅವರ ಸಂಭಾವನೆ ಮಾತ್ರ ಏಕೆ ಕಡಿಮೆ ಎಂಬ ಪ್ರಶ್ನೆಗಳು ಎದ್ದಿವೆ.

2024ರ ಐಪಿಎಲ್​ಗೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ಕೋಲ್ಕತ್ತ ತಂಡವು ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತು. ಇದು ರಿಂಕು ಮತ್ತು ಸ್ಟಾರ್ಕ್ ನಡುವಿನ ಸಂಭಾವನೆ ಬಗ್ಗೆ ಚರ್ಚೆಗೆ ಕಾರಣವಾಯಿತು. ಇತ್ತೀಚೆಗೆ ರಿಂಕು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನಗೆ 55 ಲಕ್ಷ ರೂ. ಸಂಬಳವೇ ಜಾಸ್ತಿಯಾಗಿದೆ ಎಂದಿದ್ದಾರೆ. ಅಲ್ಲದೆ, ನಾನು ಕ್ರಿಕೆಟ್‌ನಲ್ಲಿ ಈ ಮಟ್ಟಕ್ಕೆ ಬರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಏನು ಸಿಕ್ಕಿದೆಯೋ ಅದರಲ್ಲೇ ನನಗೆ ತೃಪ್ತಿ ಇದೆ ಎಂದಿದ್ದಾರೆ.

ನನ್ನ ದೃಷ್ಟಿಯಲ್ಲಿ 55 ಲಕ್ಷ ರೂ. ಸಂಭಾವನೆ ತುಂಬಾ ಜಾಸ್ತಿ. ಕ್ರಿಕೆಟ್ ಆಡಲು ಶುರು ಮಾಡಿದಾಗ ಈ ಮಟ್ಟಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಬಾಲ್ಯದಲ್ಲಿ ಐದು ರೂಪಾಯಿಗೆ ದುಡಿದಿದ್ದೆ. ಈಗ 55 ಲಕ್ಷ ಸಂಪಾದಿಸುತ್ತಿದ್ದೇನೆ. ಇದಕ್ಕಿಂತ ಸಂತೋಷ ಏನಿದೆ? ದೇವರು ನನಗೆ ಕೊಟ್ಟದ್ದರಲ್ಲಿ ಖಂಡಿತವಾಗಿಯೂ ಸಂತೋಷಪಡುತ್ತೇನೆ. ಇದ್ಯಾವುದು ಇಲ್ಲದಿರುವ ದಿನಗಳನ್ನು ನೋಡಿದ್ದೇನೆ. ನನಗೆ ಹಣದ ಬೆಲೆ ತಿಳಿದಿದೆ ಎಂದು ದೈನಿಕ್​ ಜಾಗರಣ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ತಮ್ಮ ಸಂಭಾವನೆಗೆ ಸಂಬಂಧಿಸಿದಂತೆ ರಿಂಕು ಸಿಂಗ್​ ಆಡಿರುವ ಮಾತುಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)