ನ್ಯೂಸ್

ವಿಡಿಯೋ ಕ್ರಿಯೇಟರ್ಸ್​ಗೆ ಕಹಿ ಸುದ್ದಿ! ಯೂಟ್ಯೂಬ್​ ನಿಯಮಗಳು ಈಗ ಇನ್ನಷ್ಟು ಕಠಿಣ, ಹಣ ಗಳಿಕೆ ಅಷ್ಟು ಸುಲಭವಿಲ್ಲ | Youtube

ಮೋಹನ್​ ಶೆಟ್ಟಿ

YouTube Monetization Rules: ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗದಲ್ಲಿ ಜನರ ಬೆರಳಂಚಿಗೆ ಹಲವು ವಿಷಯಗಳನ್ನು ಕ್ಷಣಮಾತ್ರದಲ್ಲಿ ತಲುಪಿಸುವ ಯೂಟ್ಯೂಬ್​, ಇದೀಗ ತನ್ನ ವಿಡಿಯೋ ಕ್ರಿಯೇಟರ್​ಗಳಿಗೆ ಹೊಸ ಶಾಕ್​ ನೀಡಿದೆ. ಲಾಭ ಗಳಿಸುವ ಮಾದರಿಯಲ್ಲಿ ಹಲವು ನಿಮಯಗಳನ್ನು ಬದಲಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಯುಟ್ಯೂಬ್ ಸಂಸ್ಥೆ ಮುಂದಾಗಿದೆ.

ಕುಳಿತ ಜಾಗದಿಂದಲೇ ನಿರೀಕ್ಷೆಗೂ ಮೀರಿದ ಹಣವನ್ನು ಗಳಿಸುವುದು ಈಗ ತುಂಬಾ ಸುಲಭ ಎಂದು ಹೇಳುತ್ತಿದ್ದವರಿಗೆ ಯೂಟ್ಯೂಬ್ ಸಂಸ್ಥೆ ಆಘಾತಕಾರಿ ಸುದ್ದಿಯನ್ನೇ ನೀಡಿದೆ. ಯೂಟ್ಯೂಬ್ ಬಳಕೆದಾರರ ಲಾಭ ಗಳಿಕೆಯ ನಿಯಮಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದ್ದು, ಈ ಹೊಸ ನಿಯಮಗಳು ಇದೇ ಜುಲೈ 15ರಿಂದ ಜಾರಿಗೆ ಬರಲಿವೆ ಎಂದು ಸ್ಪಷ್ಟಪಡಿಸಿದೆ. ಕೃತಕ ಬುದ್ಧಿಮತ್ತೇ ವಿಷಯವನ್ನು ಪ್ರಕಟಿಸುವ ಮತ್ತು ವಿಷಯವನ್ನು ನಕಲಿಸುವ ಯೂಟ್ಯೂಬ್ ಚಾನಲ್‌ಗಳ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ. ಮತ್ತು ಹಣ ಗಳಿಕೆಯ ಅವಕಾಶವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್‌ಗಳ ಸಂಖ್ಯೆ ಊಹೆಗೂ ಮೀರುವಂತೆ ಬೆಳೆದಿದೆ. ಈ ಪ್ಲಾಟ್​ಫಾರ್ಮ್​ನಲ್ಲಿರುವ ಬಳಕೆದಾರರು ತಮ್ಮ ಬಹುತೇಕ ವಿಡಿಯೋಗಳಲ್ಲಿ ಎಐ ಬಳಸಿ ಸುಲಭವಾಗಿ ವಿಡಿಯೊಗಳನ್ನು ರಚಿಸುತ್ತಿದ್ದಾರೆ. ಅನೇಕ ಯೂಟ್ಯೂಬ್ ಕ್ರಿಯೇಟರ್ಸ್​ ಸಣ್ಣ ಬದಲಾವಣೆಗಳೊಂದಿಗೆ ಇತರರ ವಿಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಅದರಲ್ಲೂ ಹಳೆಯ ವಿಡಿಯೋಗಳು ರೀ-ಅಪ್‌ಲೋಡ್ ಮಾಡುವ ಮೂಲಕ ಹೆಚ್ಚಿನ ವೀಕ್ಷಣೆ ಪಡೆಯುತ್ತಿದ್ದಾರೆ. ಇದನ್ನೆಲ್ಲ ಬಹಳ ಸೂಕ್ಷ್ಮವಾಗಿ ಗಮನಿಸಿರುವ ಸಂಸ್ಥೆ, ಇನ್ಮುಂದೆ ಹಣ ಗಳಿಸುವ ದಾರಿ ಮತ್ತಷ್ಟು ಕಠಿಣವಾಗಲಿದೆ ಎಂಬುದನ್ನು ಕಟ್ಟುನಿಟ್ಟಿನ ಕ್ರಮ ಮೂಲಕ ಎಚ್ಚರಿಸಿದೆ.

ಏನು ಹೊಸ ನಿಯಮಗಳು?

ಜುಲೈ 15, 2025ರಿಂದ, ಒಂದೇ ವಿಡಿಯೊವನ್ನು ಪದೇ ಪದೇ ಅಪ್‌ಲೋಡ್ ಮಾಡುವವರು ಅಥವಾ ಬೇರೆಯವರು ಈಗಾಗಲೇ ಪಬ್ಲಿಶ್​ ಮಾಡಿರುವ ವಿಡಿಯೊವನ್ನು ಪೋಸ್ಟ್ ಮಾಡುವವರು ಇನ್ಮುಂದೆ ಯುಟ್ಯೂಬ್​ನಿಂದ ಹಣವನ್ನು ಪಡೆಯುವುದಿಲ್ಲ. ಇದಲ್ಲದೆ, ಆ ಚಾನಲ್‌ನ ಹಣ ಗಳಿಕೆಯೂ ಬಂದ್ ಆಗಲಿದೆ.

ಪ್ಲಾಟ್‌ಫಾರ್ಮ್‌ಗೆ ಅಪ್‌ಲೋಡ್ ಮಾಡಲಾದ ವಿಡಿಯೊಗಳ ಗುಣಮಟ್ಟವನ್ನು ಸುಧಾರಿಸಲು ಯೂಟ್ಯೂಬ್ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ರೀತಿಯಾಗಿ, ಯೂಟ್ಯೂಬ್ ತನ್ನ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಇದು ಕ್ರಿಯೇಟರ್ಸ್​ ಶ್ರಮ ಉಳಿಸಿಕೊಳ್ಳುವುದು ಮತ್ತು ಪ್ಲಾಟ್‌ಫಾರ್ಮ್‌ನ ದುರುಪಯೋಗಪಡಿಸಿಕೊಳ್ಳುವ ಚಾನಲ್‌ಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಮೂಲ ಉದ್ದೇಶವಾಗಿದೆ.

ಈ ರೀತಿಯ ವಿಡಿಯೊಗಳಿಗೆ ಹಣಗಳಿಕೆ ಇರಲ್ಲ!

  • ಮೂಲ ವೀಡಿಯೊಗಳಿಗೆ ಹೆಚ್ಚಿನ ಆದ್ಯತೆ.
  • ಸಣ್ಣ ಬದಲಾವಣೆಗಳೊಂದಿಗೆ ಬೇರೆಯವರ ವಿಷಯವನ್ನು ಪೋಸ್ಟ್ ಮಾಡಲು ಅನುಮತಿ ಇಲ್ಲ.
  • ನಿಮ್ಮದೇ ಸ್ವಂತ ಹಾಗೂ ಹೊಸ ವಿಡಿಯೋಗೆ ಮಾತ್ರ ಜಾಗ.
  • ಒಂದೇ ವೀಡಿಯೊವನ್ನು ಪದೇ ಪದೇ ಅಪ್‌ಲೋಡ್ ಮಾಡುವುದು ನಿಷೇಧ.
  • ಹಣಕ್ಕಾಗಿ ಒಂದೇ ವಿಡಿಯೋವನ್ನು ರೀ-ಅಪ್‌ಲೋಡ್ ಮಾಡಲು ಅವಕಾಶವಿಲ್ಲ.
  • ರೊಬೊಟಿಕ್ ಧ್ವನಿಗಳನ್ನು ಹೊಂದಿರುವ ಟೆಂಪ್ಲೇಟ್‌ಗಳು ಮತ್ತು ದೃಶ್ಯಗಳನ್ನು ಹೊಂದಿರುವ ವಿಡಿಯೊಗಳಿಗೆ ಅನುಮತಿಯಿಲ್ಲ.
  • ಸುಳ್ಳು ಮಾಹಿತಿ ಅಥವಾ ಮನರಂಜನೆಯಿಲ್ಲದ ವಿಷಯವನ್ನು ಹೊಂದಿರುವ ವಿಡಿಯೊಗಳಿಗೆ ಅನುಮತಿ ರದ್ದು.
  • ಮುಖ ಮತ್ತು ಸ್ಪ್ಯಾಮ್ ವಿಷಯ ಹೊಂದಿರುವ ಚಾನಲ್‌ಗಳು ನಿಷೇಧ.
  • ಶಿಕ್ಷಣ ಅಥವಾ ಮನರಂಜನೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಸತು ಇರಬೇಕು.

ಎಐ ಆಧರಿತ ವೀಡಿಯೊಗಳ ಮೇಲೆ ಪರಿಣಾಮ?

ಯೂಟ್ಯೂಬ್​ ಸ್ಪಷ್ಟವಾಗಿ ಎಐ ವಿಷಯವನ್ನು ನಿಷೇಧಿಸಿಲ್ಲ. ಆದಾಗ್ಯೂ, ಈ ನವೀಕರಣವು ಎಐ ಧ್ವನಿಗಳು, ಅವತಾರಗಳು ಅಥವಾ ಸ್ವಯಂಚಾಲಿತ ಸ್ಕ್ರಿಪ್ಟ್‌ಗಳನ್ನು ಹೆಚ್ಚು ಅವಲಂಬಿಸಿರುವ ಚಾನಲ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಈ ಕಠಿಣ ನಿಯಮಗಳು ಮಾನವರ ಬದಲು ಸ್ವಯಂಚಾಲಿತವಾಗಿ ಉತ್ಪತ್ತಿಯಾಗುವ ಧ್ವನಿಗಳನ್ನು ಒಳಗೊಂಡಿರುವ ಮತ್ತು ಕೃತಕ ಬುದ್ಧಿಮತ್ತೇ ಬಳಸಿ ತಯಾರಿಸುವ ವಿಡಿಯೊಗಳಿಗೂ ಅನ್ವಯಿಸುತ್ತದೆ.

ವಿಭಿನ್ನ, ವಿಶೇಷತೆಗೆ ಮಣೆ

ಜುಲೈ 15ರಿಂದ, ಯೂಟ್ಯೂಬ್​ ಹೊಸ ವಿಷಯಕ್ಕೆ ಆದ್ಯತೆ ನೀಡುತ್ತದೆ. ಇದು ಹೊಸ ಮಾಹಿತಿಯನ್ನು ಒದಗಿಸುವ ಅಥವಾ ಶೈಕ್ಷಣಿಕ, ನವೀನ, ಸೃಜನಶೀಲ ಅಥವಾ ಮನರಂಜನೆಯ ವಿಡಿಯೊಗಳನ್ನು ಮಾತ್ರ ಅನುಮತಿಸುತ್ತದೆ. ನಿಮ್ಮ ವಿಷಯವು ವಿಶೇಷವಾಗಿ ಉಪಯುಕ್ತವಾಗಿದ್ದರೆ ಮಾತ್ರ ಯೂಟ್ಯೂಬ್​ನಿಂದ ಲಾಭ ನೋಡಲು ಸಾಧ್ಯ ಎಂಬುದು ಗಮನದಲ್ಲಿರಲಿ.

ಯಾವ ವಿಷಯಗಳ ಬಗ್ಗೆ ಜಾಗೃತರಾಗಿರಬೇಕು?

  • ಅನನ್ಯ, ವೈಯಕ್ತಿಕ ವಿಷಯದ ಮೇಲೆ ಗಮನಹರಿಸಿ
  • ನಕಲು ವಿಡಿಯೊಗಳು ಅಥವಾ ಟೆಂಪ್ಲೇಟ್ ಆಧರಿತ ವಿಡಿಯೊಗಳ ಪೋಸ್ಟ್​ ತಕ್ಷಣವೇ ಕೈಬಿಡಿ
  • ವಿಷಯ ರಚನೆಗಾಗಿ ಎಐ ಪರಿಕರಗಳನ್ನು ಬಳಸುವಾಗ ಜಾಗರೂಕರಾಗಿರಿ.
  • ವಿಡಿಯೊಗಳು ಮೌಲ್ಯ ಅಥವಾ ಸ್ವಂತಿಕೆಯನ್ನು ಹೊಂದಿವೆ ಎಂಬುದನ್ನು ಎರಡು ಬಾರಿ ಖಚಿತಪಡಿಸಿಕೊಳ್ಳಿ.