ನ್ಯೂಸ್

ಆಕೆ ಸಾವಿನ ಕುರಿತಂತೆ ವಿಚಾರಣೆ ಎದುರಿಸೋಕೆ ಬಂದ ಈತ ಠಾಣೆ ಹಿಂಭಾಗವೇ ಪ್ರಾಣ ಕಳ್ಕೊಂಡ!

ಬೆಂಗಳೂರು: ಒಂದು ಸಾವಿನ ಕುರಿತಂತೆ ಪೊಲೀಸರು ಆರಂಭಿಸಿದ ತನಿಖೆ ಈಗ ಮತ್ತೊಂದು ಸಾವಿನ ಹಂತಕ್ಕೆ ಬಂದು ತಲುಪಿದೆ. ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆಂದು ಕರೆಸಿದ್ದ ಯುವಕ ಠಾಣೆ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ಹಿಂಭಾಗ ಈ ಪ್ರಕರಣ ನಡೆದಿದೆ. ನಂದಕುಮಾರ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡವ. ಜು. 16ರಂದು ಅಕ್ಷಯ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ವಿಚಾರಣೆಗೆ ಕರೆಸಿದ್ದರು.

ಅಕ್ಷಯ ಪಾಲಕರು ನಂದಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ವಿಚಾರಣೆಗೆ ಕರೆಸಿದ್ದರು. ಪೊಲೀಸರು ಕೊಟ್ಟ ನೋಟಿಸ್​​ನಂತೆ ಠಾಣೆಗೆ ಬಂದ ನಂದಕುಮಾರ್, ವಿಚಾರಣೆ ಎದುರಿಸಿದ ಬಳಿಕ ಠಾಣೆ ಹಿಂಭಾಗಕ್ಕೆ ಹೋಗಿ ಶೂ ಲೇಸ್​ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.