ನ್ಯೂಸ್

'ಉತ್ತರ ಪ್ರದೇಶ ಪೊಲೀಸರನ್ನು ಸಿಎಂ ಯೋಗಿ ಆದಿತ್ಯನಾಥ್​ ನಂಬುವುದಿಲ್ಲ'

ನವದೆಹಲಿ: ಹಾಥರಸ್​ ಗ್ಯಾಂಗ್​ರೇಪ್​ ಪ್ರಕರಣವನ್ನು ನಿರ್ವಹಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ವಿಫಲವಾಗಿದ್ದಾರೆಂದು ರಾಜ್ಯದ ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ.

ಸಿಬಿಐ ಚಾರ್ಜ್​ಶೀಟ್ ಪ್ರಕಾರ, 20 ವರ್ಷದ ದಲಿತ ಯುವತಿಯು ಸೆಪ್ಟೆಂಬರ್ 14 ರಂದು ಹಾಥರಸ್​ನಲ್ಲಿ ಮೇಲ್ಜಾತಿ ಸಮುದಾಯದವರು ಎನ್ನಲಾದ ನಾಲ್ವರು ಯುವಕರಿಂದ ಅತ್ಯಾಚಾರಕ್ಕೊಳಗಾಗಿದ್ದು, ಗಂಭೀರವಾಗಿ ಗಾಯಗೊಂಡು ದೆಹಲಿಯ ಆಸ್ಪತ್ರೆಯಲ್ಲಿ ಸಾವಿಗೀಡಾದಳು. ಸೆಪ್ಟೆಂಬರ್ 30ರ ರಾತ್ರಿ ಯುವತಿ ಅಸುನೀಗಿದಾಗ ಮನೆಯ ಬಳಿ ಆತುರದಿಂದ ಅಂತ್ಯಕ್ರಿಯೆ ಮಾಡಲಾಯಿತು. ಈ ಘಟನೆಯು ರಾಷ್ಟ್ರದಾದ್ಯಂತ ಆಕ್ರೋಶವನ್ನು ಉಂಟುಮಾಡಿತು ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಕಾರ್ಮಿಕ ಸಚಿವ ಸುನೀಲ್​ ಭರಾಳ, ಯುಪಿ ಸರ್ಕಾರ ಯಾವಾಗಲೂ ಸಂತ್ರಸ್ತೆಯ ಕುಟುಂಬದ ಪರವಾಗಿ ನಿಲ್ಲುತ್ತದೆ. ಸಿಎಂ ಯೋಗಿ ಆದಿತ್ಯನಾಥ್​ ಅವರೇ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ಅಲ್ಲದೆ, ಯುಪಿ ಪೊಲೀಸರು ಚೆನ್ನಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಯೋಗಿ ಅವರಿಗೆ ಇಲ್ಲ. ಎಲ್ಲ ಪೊಲೀಸ್​ ಅಧಿಕಾರಿಗಳು ಒಳ್ಳೆಯವರಲ್ಲ. ಆರಂಭದ ದಿನದಿಂದ ಯೋಗಿ ಅವರು ಸಂತ್ರಸ್ತೆಯ ಕುಟುಂಬದೊಂದಿಗೆ ಇದ್ದಾರೆಂದು ಹೇಳಿದರು.

ನಾಲ್ವರು ಆರೋಪಿಗಳ ವಿರುದ್ಧ ಕಳೆದ ವಾರ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ. ಅಲ್ಲದೆ, ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆ ಅಡಿಯು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದೆ. ದೆಹಲಿಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಹಾಥರಸ್​ನ ಕೋರ್ಟ್​ ಮುಂದೆ ಚಾರ್ಜ್​ಶೀಟ್​ ಅನ್ನು ತನಿಖಾ ಸಂಸ್ಥೆ ಸಲ್ಲಿಸಿದೆ.

ಸಾವಿಗೀಡಾದ ಬೆನ್ನಲ್ಲೇ ಕುಟುಂಬದ ಒಪ್ಪಿಗೆಯನ್ನು ಪಡೆಯದೇ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ರಾತ್ರೋರಾತ್ರಿ ಬಿಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ಮಾಡಿ ಮುಗಿಸಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಲ್ಲದೆ ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಪ್ರಕರಣ ಕುರಿತು ಸಾಕಷ್ಟು ದೂರುಗಳನ್ನು ಸಹ ಸಲ್ಲಿಸಲಾಗಿದೆ. (ಏಜೆನ್ಸೀಸ್​)