ನ್ಯೂಸ್

ಕುತೂಹಲ ಕೆರಳಿಸಿದೆ ಯತ್ನಾಳ್ ಅವರ ಆ ಒಂದು ಸಾಲು; ಏನದು? ಭುಗಿಲೇಳುತ್ತಾ ಭಿನ್ನಮತ?

Ravikanth Kundapura

ಬೆಂಗಳೂರು: ವಿಪಕ್ಷ ನಾಯಕರ ಆಯ್ಕೆ ಕುರಿತಂತೆ ನಡೆಯುತ್ತಿರುವ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗದೆ ಹೊರಹೋಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುಳಿವನ್ನು ನೀಡಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ಶಾಸಕಾಂಗ ಸಭೆಗೆ ಹಾಜರಾಗದೆ ಹೊರಹೋಗಿದ್ದರಿಂದ ಬಿಜೆಪಿಯಲ್ಲಿನ ಭಿನ್ನಮತ ಬಯಲಾಗಿದೆ. ಅದಾದ ಕೆಲವೇ ನಿಮಿಷಗಳಲ್ಲಿ ಇದೀಗ ಯತ್ನಾಳ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಯತ್ನಾಳ್ ತಮ್ಮ ಎಕ್ಸ್​ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿರುವ ಸಾಲು ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳಲಿದೆಯಾ ಎಂಬ ಅನುಮಾನವನ್ನು ಹುಟ್ಟಿಸಿದೆ. 'ನ ದೈನ್ಯಂ, ನ ಪಲಾಯನಂ' ಎಂದು ಕನ್ನಡದಲ್ಲಿ ಬರೆದಿರುವ ಅವರು ಇಂಗ್ಲಿಷ್​ನಲ್ಲಿ ಇನ್ನೊಂದಷ್ಟು ಸಂಗತಿ ಹೇಳಿಕೊಂಡಿದ್ದಾರೆ.

ದೀನನಾಗಿಯೂ ಇರುವುದಿಲ್ಲ, ಪಲಾಯನವನ್ನೂ ಮಾಡುವುದಿಲ್ಲ ಎಂದಿರುವ ಯತ್ನಾಳ್, ತಮ್ಮ ಹೋರಾಟ ಪ್ರಬಲವಾಗಿ ಮುಂದುವರಿಯಲಿದೆ ಎಂಬುದನ್ನು ತಿಳಿಸಿದ್ದಾರೆ. ಒಬ್ಬ ಹೋರಾಟಗಾರ ಯಾವುದನ್ನೂ ದೂರಲು ಅಥವಾ ವಿಷಾದಿಸಲು ಸಾಧ್ಯವಿಲ್ಲ. ಆತನ ಜೀವನವು ಅಂತ್ಯವಿಲ್ಲದ ಸವಾಲು ಮತ್ತು ಸವಾಲುಗಳಲ್ಲಿ ಬಹುಶಃ ಒಳ್ಳೆಯದು ಅಥವಾ ಕೆಟ್ಟದ್ದು ಎಂದಿರಲು ಸಾಧ್ಯವಿಲ್ಲ. ಸವಾಲುಗಳು ಸವಾಲುಗಳಷ್ಟೇ ಎಂಬುದನ್ನೂ ಯತ್ನಾಳ್ ಹೇಳಿಕೊಂಡಿದ್ದಾರೆ.