ನ್ಯೂಸ್

ಬಾವಲಿ ಗುಹೆಯ ಭಯಾನಕ ಘಟನೆ ಬಿಚ್ಚಿಟ್ಟ ವುಹಾನ್​ ವಿಜ್ಞಾನಿಗಳು: ಡಬ್ಲ್ಯುಎಚ್​ಒ ಎದುರು ಬೆತ್ತಲಾಗುತ್ತಾ ಚೀನಾ?

ಬೀಜಿಂಗ್​: ಮಹಾಮಾರಿ ಕರೊನಾ ವೈರಸ್​ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಆರ್ಥಿಕತೆ ಸೇರಿದಂತೆ ಇಡೀ ಜನ-ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಚೀನಾದ ವುಹಾನ್​ ನಗರದಲ್ಲಿ ಸ್ಫೋಟಗೊಂಡ ವೈರಸ್​ ಇಡೀ ಜಗತ್ತನ್ನೇ ಆವರಿಸಿದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ವಿಜ್ಞಾನಿಗಳ ತಂಡ ವುಹಾನ್​ಗೆ ಭೇಟಿ ನೀಡಿದೆ.

ಇದರ ಬೆನ್ನಲ್ಲೇ ವುಹಾನ್​ ಲ್ಯಾಬ್​ನಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಸ್ಫೋಟಕ ರಹಸ್ಯವೊಂದನ್ನು ಹೊರಗೆಡವಿದ್ದಾರೆ. ಕರೊನಾ ಸೋಂಕಿತ ಬಾವಲಿಗಳ ಆವಾಸ ಸ್ಥಾನವಾಗಿರುವ ಗುಹೆಯಲ್ಲಿ ಸ್ಯಾಂಪಲ್ಸ್​ ಸಂಗ್ರಹಿಸುವಾಗ ಬಾವಲಿಗಳ ಕಡಿತಕ್ಕೆ ಒಳಗಾಗಿದ್ದಾಗಿ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ.

ಸಂಶೋಧಕರೊಬ್ಬರು ಮಾತನಾಡಿ, ಬಾವಲಿಯ ಕೋರೆಹಲ್ಲುಗಳು, ಸೂಜಿಯಂತೆ ಕೈಗೆ ಹಾಕಿದ್ದ ರಬ್ಬರ್​ ಗ್ಲೌಸ್​ ಒಳಗೆ ತೂರಿಕೊಂಡಿತು ಎಂದು ತಿಳಿಸಿದ್ದಾರೆ.

ಚೀನಾದ ಮಾಧ್ಯಮವೊಂದು 2017ರಲ್ಲಿ ಸೆರೆಹಿಡಿದು ಬಿತ್ತರಿಸಿದ ದೃಶ್ಯದಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಡಬ್ಲ್ಯುಎಚ್​ಒ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಬಾವಲಿಗಳ ಗುಹೆಯನ್ನು ಪ್ರವೇಶಿಸಿರುವುದು ದೃಶ್ಯದಲ್ಲಿದೆ. ಗ್ಲೌಸ್​ ಧರಿಸದೆ, ಫೇಸ್​ ಮಾಸ್ಕ್​ ಬಳಸದೆ ಸೋಂಕಿತ ಬಾವಲಿಗಳ ನಿರ್ವಹಣೆ ಮಾಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ಇದರ ಬೆನ್ನಲ್ಲೇ ವುಹಾನ್​ ಲ್ಯಾಬ್ ವಿಜ್ಞಾನಿಗಳು ಸ್ಯಾಂಪಲ್​ ಸಂಗ್ರಹ ವೇಳೆ ಬಾವಲಿಗಳ ಕೈಯಲ್ಲಿ ಕಚ್ಚಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಈ ಸ್ಫೋಟಕ ಬಹಿರಂಗವು ಡಬ್ಲ್ಯುಎಚ್​ಒ ತನಿಖಾ ತಂಡಕ್ಕೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.

ವುಹಾನ್​ ಭೇಟಿಗೆ ಚೀನಾ ಸರ್ಕಾರ ನಕಾರ ವ್ಯಕ್ತಪಡಿಸಿದರೂ ತನ್ನ ಪಟ್ಟ ಸಡಿಲಿಸದ ಡಬ್ಲ್ಯುಎಚ್​ಒ ತಂಡ ತಿಂಗಳುಗಳ ಕಾದಾಟದ ನಂತರ ಕರೊನಾ ಮೂಲವನ್ನು ತನಿಖೆ ನಡೆಸುತ್ತಿದೆ. (ಏಜೆನ್ಸೀಸ್​)