Safest airlines : ಪ್ರಪಂಚದಾದ್ಯಂತ ಜನರನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಂಪರ್ಕಿಸುವ ಪ್ರಮುಖ ಸಾರಿಗೆಗಳಲ್ಲಿ ವಿಮಾನ ಪ್ರಯಾಣ ಮೊದಲ ಸ್ಥಾನದಲ್ಲಿದೆ. ಪ್ರವಾಸೋದ್ಯಮ, ವ್ಯವಹಾರ ಅಥವಾ ವ್ಯಾಪಾರಕ್ಕಾಗಿ, ವಿಮಾನ ಪ್ರಯಾಣವು ಬಹಳ ಕಡಿಮೆ ಸಮಯದಲ್ಲಿ ದೀರ್ಘ ದೂರವನ್ನು ಕ್ರಮಿಸಲು ಸಹಾಯ ಮಾಡುತ್ತದೆ.
ಆಹ್ಲಾದಕರ ವಿಮಾನ ಪ್ರಯಾಣ ಅನುಭವಕ್ಕೆ ಮೂಲ ಸೌಕರ್ಯ ಮತ್ತು ಐಷಾರಾಮಿ ಮುಖ್ಯವಾದರೂ, ಸುರಕ್ಷತೆಯು ಅತ್ಯಂತ ಪ್ರಮುಖ ಅಂಶವಾಗಿದೆ. ಪ್ರಯಾಣಿಕರ ಸುರಕ್ಷತೆ ಪ್ರತಿಯೊಂದು ವಿಮಾನಯಾನ ಸಂಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ, ಇತ್ತೀಚೆಗೆ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಈ ದುರಂತವನ್ನು ನೆನೆಪು ಮಾಡಿಕೊಂಡರೆ ಈ ಕ್ಷಣದಲ್ಲೂ ಕಣ್ತುಂಬಿಕೊಳ್ಳುತ್ತೆ. 12 ಸಿಬ್ಬಂದಿ ಸೇರಿ 241 ಮಂದಿ ದುರ್ಘಟನೆಯಲ್ಲಿ ಸಾವಿಗೀಡಾದರು. ವಿಮಾನ ಪತನಗೊಂಡ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು. ಅದನ್ನು ನೋಡಿದರೆ, ವಿಮಾನ ಹತ್ತುವುದಕ್ಕೂ ಭಯವಾಗುತ್ತದೆ.
ಈ ದುರಂತ ಘಟನೆಯ ನಡುವೆಯೇ AirlineRatings.com ವಿಶ್ವದ ಅತ್ಯಂತ ಸುರಕ್ಷಿತ ಪೂರ್ಣ-ಸೇವಾ ವಿಮಾನಯಾನ ಸಂಸ್ಥೆಗಳ 2025ರ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಈ ವಿಮಾನಯಾನ ಸಂಸ್ಥೆಗಳನ್ನು ಪೂರ್ಣ-ಸೇವಾ ವಿಮಾನಯಾನ ಸಂಸ್ಥೆಗಳು ಮತ್ತು ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಗಳು ಎಂದು ಎರಡು ವರ್ಗಗಳಾಗಿ ವರ್ಗೀಕರಿಸಲಾಗಿದೆ. ಈ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಅವುಗಳಲ್ಲಿ ಕೆಲವು ವಿಮಾನದ ವಯಸ್ಸು, ವಿಮಾನದ ಗಾತ್ರ, ರೇಟ್ ಆಫ್ ಇನ್ಸಿಡೆಂಟ್ಸ್, ಪೈಲಟ್ ಕೌಶಲ್ಯ ಮತ್ತು ತರಬೇತಿ ಇತ್ಯಾದಿ ಸೇರಿರುತ್ತವೆ. ಶ್ರೇಯಾಂಕವು 385 ವಿಮಾನಯಾನ ಸಂಸ್ಥೆಗಳ ವ್ಯಾಪಕ ಮೌಲ್ಯಮಾಪನವನ್ನು ಆಧರಿಸಿದೆ.
ಎರಡೂ ವಿಭಾಗಗಳಲ್ಲಿ ಏರ್ ಇಂಡಿಯಾ ಟಾಪ್ 25ರ ಸುರಕ್ಷಿತ ವಿಮಾನಯಾನ ಸಂಸ್ಥೆಗಳಲ್ಲಿ ಸ್ಥಾನ ಪಡೆದಿಲ್ಲ. ಆದಾಗ್ಯೂ, ಇಂಡಿಗೋ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
1. ಏರ್ ನ್ಯೂಜಿಲೆಂಡ್
2. ಕ್ವಾಂಟಾಸ್
3. ಕ್ಯಾಥೆ ಪೆಸಿಫಿಕ್; ಕತಾರ್ ಏರ್ವೇಸ್; ಎಮಿರೇಟ್ಸ್
4. ವರ್ಜಿನ್ ಆಸ್ಟ್ರೇಲಿಯಾ
5. ಎತಿಹಾಡ್ ಏರ್ವೇಸ್
6. ಆಲ್ ನಿಪ್ಪಾನ್ ಏರ್ವೇಸ್ (ANA)
7. EVA ಏರ್
8. ಕೊರಿಯನ್ ಏರ್
9. ಅಲಾಸ್ಕಾ ಏರ್‌ಲೈನ್ಸ್
10. ಟರ್ಕಿಶ್ ಏರ್‌ಲೈನ್ಸ್
1. HK ಎಕ್ಸ್‌ಪ್ರೆಸ್
2. ಜೆಟ್‌ಸ್ಟಾರ್ ಗ್ರೂಪ್
3. ರಯಾನೇರ್
4. ಈಸಿಜೆಟ್
5. ಫ್ರಾಂಟಿಯರ್ ಏರ್‌ಲೈನ್ಸ್
6. ಏರ್‌ಏಷ್ಯಾ
7. ವಿಜ್ ಏರ್
8. ವಿಯೆಟ್‌ಜೆಟ್ ಏರ್
9. ಸೌತ್‌ವೆಸ್ಟ್ ಏರ್‌ಲೈನ್ಸ್
10. ವೊಲಾರಿಸ್
ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳನ್ನು ಪ್ರಸ್ತುತ ಹೇಗೆ ರೇಟಿಂಗ್ ಮಾಡಲಾಗಿದೆ ಎಂಬುದರ ಕುರಿತು AirlineRatings.com ಡೇಟಾವನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯನ್ನು ತಯಾರಿಸಲು ಇದು 7-ಸ್ಟಾರ್ ವಿಮಾನಯಾನ ಸುರಕ್ಷತಾ ರೇಟಿಂಗ್ ವ್ಯವಸ್ಥೆಯನ್ನು ಬಳಸುತ್ತದೆ. ಈ 7-ಸ್ಟಾರ್ ವ್ಯವಸ್ಥೆಯು ಮೂರು ಪ್ರಮುಖ ಸ್ತಂಭಗಳನ್ನು ಆಧರಿಸಿದೆ. ಪೈಲಟ್-ಸಂಬಂಧಿತ ಸುರಕ್ಷತಾ ಘಟನೆಗಳು, ಮಾರಕ ಅಪಘಾತಗಳು ಮತ್ತು ಜಾಗತಿಕ ಲೆಕ್ಕಪರಿಶೋಧನಾ ಕಾರ್ಯಕ್ಷಮತೆ. ಪಟ್ಟಿಯ ಪ್ರಕಾರ, ಸ್ಪೈಸ್‌ಜೆಟ್ 7 ರಲ್ಲಿ 7 ಸ್ಟಾರ್ಗಳೊಂದಿಗೆ ಭಾರತೀಯ ವಾಹಕಗಳಲ್ಲಿ ಮುಂಚೂಣಿಯಲ್ಲಿದೆ. ಇಂಡಿಗೋ ಮತ್ತು ಆಕಾಶ ಏರ್ ಎರಡೂ 7 ರಲ್ಲಿ 6 ಸ್ಟಾರ್ಗಳನ್ನು ಪಡೆದಿವೆ. (ಏಜೆನ್ಸೀಸ್)