ನವದೆಹಲಿ: ವಿಶ್ವದ ಶ್ರೀಮಂತ ಯೂಟ್ಯೂಬರ್ಗಳಲ್ಲಿ ಒಬ್ಬರಾದ ಲಿಲ್ಲಿ ಸಿಂಗ್ ಕುರಿತಾದ ಆಸಕ್ತಿದಾಯಕ ಮಾಹಿತಿ ಬಹಿರಂಗವಾಗಿದೆ. ಯೂಟ್ಯೂಬ್ ಮೂಲಕ ಇವರು ಗಳಿಸುತ್ತಿರುವ ಆದಾಯದ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುವುದಂತೂ ಗ್ಯಾರಂಟಿ.
ಲಿಲ್ಲಿ ಸಿಂಗ್ ಭಾರತ ಮೂಲದವರು. ಇವರಿಗೆ 34 ವರ್ಷ ವಯಸ್ಸು. ಸೂಪರ್ ವುಮ್ಯಾನ್ ಎಂಬುದು ಇವರ ಅಡ್ಡ ಹೆಸರು. ಇವರು ಪಾಲಕರ ಮೂಲ ಪಂಜಾಬ್. ಇದೀಗ ಕೆನಡಾದಲ್ಲಿ ನೆಲೆಸಿದ್ದಾರೆ. ವಿಶ್ವದ ಶ್ರೀಮಂತ ಯೂಟ್ಯೂಬರ್ಗಳಲ್ಲಿ ಲಿಲ್ಲಿ ಸಿಂಗ್ ಕೂಡ ಒಬ್ಬರು.
ಲಿಲ್ಲಿ ಸಿಂಗ್ 201ರಲ್ಲಿ ತಮ್ಮ ಯೂಟ್ಯೂಬ್ ಜರ್ನಿಯನ್ನು ಆರಂಭಿಸಿದರು. ಅದಕ್ಕೂ ಮುನ್ನ ಇವರು ರೆಸ್ಟೋರೆಂಟ್ ಒಂದರಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಬಳಿಕ ಅವರು ತಮ್ಮ YouTube ಚಾನಲ್‌ನಲ್ಲಿ ಸ್ಫೂರ್ತಿದಾಯಕ ಮಾತುಕತೆಗಳು, ದೈನಂದಿನ ಚಟುವಟಿಕೆಗಳು, ಅಪಹಾಸ್ಯ ಮತ್ತು ವಿಡಂಬನಾತ್ಮಕ ಟೀಕೆಗಳುಳ್ಳ ವಿಡಿಯೋಗಳೊಂದಿಗೆ ಜನಪ್ರಿಯತೆಯನ್ನು ಗಳಿಸಿದರು.
2016ರಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಸೆಲೆಬ್ರಿಟಿಗಳಲ್ಲಿ ಲಿಲ್ಲಿ ಸಿಂಗ್ ಮೊದಲ ಸ್ಥಾನದಲ್ಲಿದ್ದರು. ಕೆನಡಾದಲ್ಲಿ ವಾಸವಿದ್ದ ಲಿಲ್ಲಿ ಅಮೆರಿಕದ ಲಾಸ್ ಏಂಜಲೀಸ್ಗೆ ಸ್ಥಳಾಂತರವಾಗಿದ್ದು, ತಮ್ಮ ಯೂಟ್ಯೂಬರ್ ವೃತ್ತಿ ಜೀವನವನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದ್ದಾರೆ.
ಯೂಟ್ಯೂಬ್ ಮೂಲಕ ಪ್ರಸಿದ್ಧರಾದ ನಂತರ ಲಿಲ್ಲಿ ಅವರು ಟಾಕ್ ಶೋ ಹೋಸ್ಟ್ ಆಗಿ ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಲು ಪ್ರಾರಂಭಿಸಿದರು. ಲಿಲ್ಲಿ ಸಿಂಗ್ ಅವರು ಅಮೆರಿಕದ ಜನಪ್ರಿಯ ಲೇಟ್ನೈಟ್ ಟಾಕ್ ಶೋ ಆಯೋಜಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿದ್ದಾರೆ.
ಲಿಲ್ಲಿ ಸಿಂಗ್ ಅವರು 2015ರಲ್ಲಿ ಆಸ್ಟ್ರೇಲಿಯಾ, ದುಬೈ, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಭಾರತದಂತಹ ದೇಶಗಳನ್ನು ಸುತ್ತಿದರು. ಇಡೀ ಪ್ರವಾಸದ ಸಾಕ್ಷ್ಯಚಿತ್ರ ಮಾಡಿ ಅದನ್ನು ಯೂಟ್ಯೂಬ್‌ನಲ್ಲಿ ಹಾಕಿದ್ದಾರೆ. 2019ರಲ್ಲಿ ದ್ವಿಲಿಂಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿದ್ದರು. ಅವರು ಲಾಸ್ ಏಂಜಲೀಸ್‌ನಲ್ಲಿ 5 ಮಲಗುವ ಕೋಣೆಗಳು ಮತ್ತು 6 ಸ್ನಾನಗೃಹಗಳೊಂದಿಗೆ 6000 ಚದರ ಅಡಿಯಲ್ಲಿ ಅದ್ಧೂರಿ ಮನೆಯನ್ನು ಹೊಂದಿದ್ದಾರೆ.
ಲಿಲ್ಲಿ ಸಿಂಗ್ ಅವರ ಮನೆಯ ಒಟ್ಟು ಮೌಲ್ಯ 4.1 ಮಿಲಿಯನ್ ಅಮೆರಿಕ ಡಾಲರ್. ಅಂದರೆ ಭಾರತೀಯ ಕರೆನ್ಸಿ ಪ್ರಕಾರ 34 ಕೋಟಿ ರೂಪಾಯಿಗೂ ಅಧಿಕ. ಹಿಂದಿನ ವರ್ಷಗಳಲ್ಲಿ ಫೋರ್ಬ್ಸ್ ನಿಯತಕಾಲಿಕೆಯಲ್ಲಿ ಯೂಟ್ಯೂಬ್ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಆದಾಯವನ್ನು ಗಳಿಸಿದವರಲ್ಲಿ ಲಿಲ್ಲಿ ಸಿಂಗ್ ಮೂರನೇ ಮತ್ತು ಹತ್ತನೇ ಸ್ಥಾನದಲ್ಲಿದ್ದರು. ಅವರ ನಿವ್ವಳ ಮೌಲ್ಯ ಅಂದಾಜು 20 ಮಿಲಿಯನ್ ಯುಎಸ್ ಡಾಲರ್ ಅಂದರೆ 160 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತದೆ. (ಏಜೆನ್ಸೀಸ್)