ನ್ಯೂಸ್

ವರ್ಕ್​ ಫ್ರಂ ಹೋಮ್​ ಕ್ಯಾನ್ಸಲ್ ಮಾಡುವಂತೆ ಶಾಸಕರ ಒತ್ತಾಯ!

arunakunigal

ಬೆಂಗಳೂರು: ಐಟಿ ಕ್ಷೇತ್ರದ ವರ್ಕ್ ​ಫ್ರಂ ಹೋಮ್​ ಕೊನೆಯಾಗಲಿ ಎಂದು ಶಾಸಕರು ವಿಧಾನಸಭೆಯಲ್ಲಿ ಗುರುವಾರ ಒತ್ತಾಯಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಶರತ್​ ಬಚ್ಚೇಗೌಡ, ಬಿಜೆಪಿಯ ರುಘಪತಿ ಭಟ್​ ಮತ್ತಿತರರು ಈ ವಿಷಯ ಪ್ರಸ್ತಾಪಿಸಿ, ಐಟಿ ಕ್ಷೇತ್ರಕ್ಕೆ ಪೂರಕವಾದ ಕ್ಷೇತ್ರಗಳಿಗೆ ಭಾರಿ ಪೆಟ್ಟು ಬೀಳುತ್ತಿದೆ. ಐಟಿ ಕಚೇರಿಗಳು ಆರಂಭವಾಗದೆ ಇರುವುದರಿಂದ ಕ್ಯಾಬ್​ ಸೇವೆ, ಕಟ್ಟಡಗಳು ಸೇರಿ ವಿವಿಧ ಉದ್ಯಮಕ್ಕೆ ತೊಡಕಾಗಿದೆ. ಎಲ್ಲವೂ ಅನ್​ಲಾಕ್​ ಆಗುತ್ತಿರುವಾಗ ಐಟಿ ವರ್ಕ್​ ಫ್ರಂ ಹೋಮ್​ ನಿಯಮವನ್ನೂ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.

ಇದಕ್ಕುತ್ತರಿಸಿದ ಡಿಸಿಎಂ ಅಶ್ವತ್ಥನಾರಾಯಣ, ಸದ್ಯಕ್ಕೆ ಒತ್ತಡ ಹಾಕಲು ಬರಲ್ಲ. ಒತ್ತಾಯ ಮಾಡುವ ಪ್ರಮೇಯವೇ ಇಲ್ಲ. ಸಂದರ್ಭವೂ ಸೂಕ್ತವಾಗಿಲ್ಲ ಎಂದರು.

ಐಟಿ ಕಂಪನಿ ಮುಚ್ಚಿರುವುದರಿಂದ ಮ್ಯಾಕ್ಸಿ ಕ್ಯಾಬ್​ ಕ್ಷೇತ್ರದವರಿಗೆ ತೊಂದರೆಯಾಗಿದೆ, ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗುತ್ತಿದೆ ಎಂದು ರಘುಪತಿ ಭಟ್​ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಶರತ್​, ವರ್ಕ್​ ಫ್ರಂ​ ಹೋಮ್​ನಿಂದ ಕಾರ್ಯಕ್ಷಮತೆ ಕಡಿಮೆಯಾಗಿದೆ. ಉದ್ಯೋಗಿಗಳು ಮುಂಚಿನಂತೆಯೇ ಕಚೇರಿಗೆ ಬಂದು ಕೆಲಸ ಮಾಡುವಂತಾಗಬೇಕು. ಅದಕ್ಕೆ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಡಿಸಿಎಂ ಮಾತನಾಡಿ, ವರ್ಕ್​ ಫ್ರಂ ಹೋಮ್​ನಿಂದಾಗಿ ಕೆಲಸಕ್ಕೆ ತೊಂದರೆಯಾಗಿಲ್ಲ. ಐಟಿ ಬೆಳವಣಿಗೆಗೆ ಅಡೆತಡೆ ಆಗಿಲ್ಲ. ವಹಿವಾಟು ಏನು ನಡೆಯಬೇಕೋ ಅದು ನಡೆದಿದೆ. ವರ್ಕ್​ ಫ್ರಂ ಹೋಮ್​ ಬಂದಿರುವುದರಿಂದ ಕಚೇರಿ ಕಟ್ಟಡ ಏನಾಗುತ್ತವೆ? ಕರೊನಾ ಸೋಂಕಿನ ಕಾರಣಕ್ಕೆ ತಾತ್ಕಾಲಿಕವಾಗಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಸೋಂಕು ಕಡಿಮೆಯಾದ ಮೇಲೆ ಎಲ್ಲವೂ ಸರಿಯಾಗಲಿದೆ ಎಂದರು.