ಜಾರ್ಖಂಡ್: ಮದುವೆ ಎಂದರೆ ಸಂಭ್ರಮ ಸಡಗರ ಎನ್ನುವ ಕಾಲವಿತ್ತು. ಆದರೆ ಇಂದಿನ ದಿನಗಳಲ್ಲಿ ಒಂದು ಮದುವೆಗೆ ಸಾವಿರಾರು ಸಮಸ್ಯೆಗಳು ಬರುತ್ತವೆ. ಗಂಡು-ಹೆಣ್ಣು ಒಪ್ಪಿದರೆ ಅವರ ಕುಟುಂಬದಿಂದಲೇ ಸಮಸ್ಯೆ ಇರುತ್ತದೆ. ಆದರೆ ಇಲ್ಲೊಬ್ಬಳು ಯುವತಿ ಮದುವೆಯಾಗಲು ಒಪ್ಪಿಲ್ಲ ಎನ್ನುವ ಕಾರಣಕ್ಕೆ ಆಕೆಯ ಕೂದಲು ಕತ್ತರಿಸಿದ ಘಟನೆ ನಡೆದಿದೆ.
ಜಾರ್ಖಂಡ್‌ನ ಪಲಮು ಎಂಬಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಥಳಿಸಿ, ಆಕೆಯ ಕೂದಲನ್ನು ಕತ್ತರಿಸಿ, ನಂತರ ಗ್ರಾಮ ಪಂಚಾಯತ್‌ನ ಆದೇಶದ ಮೇರೆಗೆ ಮೆರವಣಿಗೆ ನಡೆಸಲಾಯಿತು. ಯುವತಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಮೂವರು ಪಂಚಾಯತ್ ಸದಸ್ಯರು ಮತ್ತು ಮಹಿಳೆಯ ಅತ್ತಿಗೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಡೆದಿದ್ದೇನು?: ಯುವತಿ ಮದುವೆಯನ್ನು ಏಪ್ರಿಲ್ 20ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಆಕೆ ಮದುವೆಯಾಗಲು ನಿರಾಕರಿಸಿದಳು. ನಂತರ ಯುವತಿ ಸುಮಾರು 20 ದಿನಗಳ ಕಾಲ ನಾಪತ್ತೆಯಾಗಿದ್ದಳು. ಅವಳು ಹಿಂದಿರುಗಿದ ನಂತರ, ಆಕೆಯನ್ನು ಗ್ರಾಮ ಪಂಚಾಯತಿಗೆ ಕರೆಯಲಾಯಿತು. ಆಕೆಯ ಕುಟುಂಬದ ಸದಸ್ಯರು ಮತ್ತು ಇತರ ಸಂಬಂಧಿಕರು ಕೂಡ ಪಂಚಾಯತ್‌ನಲ್ಲಿ ಹಾಜರಿದ್ದರು. ಪಂಚಾಯತ್ ಸದಸ್ಯರ ನಿರ್ಧಾರದ ಆಧಾರದ ಮೇಲೆ, ಆಕೆಯ ಕೂದಲನ್ನು ಕತ್ತರಿಸಿ ಥಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.