ನ್ಯೂಸ್

ಪೊಲೀಸರ ಕಿರುಕುಳಕ್ಕೆ ಮಹಿಳೆ ಬಲಿ?; ಸೆಲ್ಫಿ ವಿಡಿಯೋ ಮಾಡಿ ಆರೋಪಿಸಿ ಮಾತ್ರೆ ತಿಂದಿದ್ದಾಕೆ ಸಾವು

ರಾಮನಗರ: ಸೆಲ್ಫಿ ವಿಡಿಯೋ ಮಾಡಿ ಪೊಲೀಸರ ವಿರುದ್ಧ ಕಿರುಕುಳದ ಆರೋಪ ಹೊರಿಸಿ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ಮಹಿಳೆ ಸಾವಿಗೀಡಾಗಿದ್ದಾಳೆ. ಈ ಮೂಲಕ ಮಹಿಳೆಯೊಬ್ಬರು ಪೊಲೀಸರ ಕಿರುಕುಳಕ್ಕೆ ಬಲಿಯಾದಂತಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಕೋಟೆ ನಿವಾಸಿ ಮಾಧುರಿ (31) ಸಾವಿಗೀಡಾದ ಮಹಿಳೆ. ಕಳೆದ ಗುರುವಾರ ರೈಲ್ವೇ ನಿಲ್ದಾಣ ಬಳಿ ಮಾಧುರಿ ಹಾಗೂ ಜ್ಯೋತಿ ಎಂಬಾಕೆ ನಡುವೆ ಗಲಾಟೆ ಆಗಿತ್ತು. ಆಗ ಆಕೆ ಈಕೆಯ ಮೊಬೈಲ್​ಫೋನ್ ಕಿತ್ತುಕೊಂಡು ಹೋಗಿದ್ದಳು. ಹೀಗಾಗಿ ಮಾಧುರಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಳು. ಆದರೆ ಮಾಧುರಿ ವಿರುದ್ಧ ಹಲವು ವಂಚನೆ ಪ್ರಕರಣಗಳು ಇದ್ದವು ಎನ್ನಲಾಗಿದ್ದು, ಪೊಲೀಸರು ದೂರು ಸ್ವೀಕರಿಸಿರಲಿಲ್ಲ.

ನ್ಯಾಯ ಕೇಳಲು ಹೋದರೆ ಪೊಲೀಸರು ನನಗೆ ಅವಮಾನ ಮಾಡಿದರು ಎಂದು ಬಳಿಕ ಸೆಲ್ಫಿ ವಿಡಿಯೋ ಮಾಡಿ ಆರೋಪಿಸಿದ್ದ ಮಾಧುರಿ, ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಗೊಂಡ ಮಾಧುರಿಯನ್ನು ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಸಾವಿಗೀಡಾಗಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಕರು ನ್ಯಾಯ ಕೋರಿ ರಾಮನಗರ ಎಸ್​ಪಿಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಚನ್ನಪಟ್ಟಣ ಟೌನ್ ಇನ್​​ಸ್ಪೆಕ್ಟರ್ ಶೋಭಾ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.