ನ್ಯೂಸ್

ಪ್ರಿಯಕರನ ಮೇಲಿನ ಸಿಟ್ಟಿಗೆ ಆತನ ಬೈಕಿಗೇ ಕಿಚ್ಚಿಟ್ಟಳು; ಧಗಧಗನೆ ಹೊತ್ತಿ ಉರಿಯಿತು ಅವಳೇ ಕೊಟ್ಟಿದ್ದ ದುಬಾರಿ ಗಿಫ್ಟ್​!

ನವದೆಹಲಿ: 'ಒಲಿದರೆ ನಾರಿ, ಮುನಿದರೆ ಮಾರಿ' ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಇಲ್ಲೊಬ್ಬಳು ಅದೆಷ್ಟರಮಟ್ಟಿಗೆ ಮುನಿದುಕೊಂಡಿದ್ದಳೆಂದರೆ, ಅವಳೇ ಉಡುಗೊರೆಯಾಗಿ ಪ್ರಿಯಕರನಿಗೆ ಕೊಟ್ಟಿದ್ದ ದುಬಾರಿ ಬೈಕ್​ ಅವಳ ಕೋಪದ ತಾಪಕ್ಕೆ ಉರಿದುಹೋಗಿದೆ. ಬಾಯ್​ಫ್ರೆಂಡ್ ಮೇಲಿನ ಸಿಟ್ಟಿಗೆ ಅವಳು ಆ ಬೈಕಿಗೇ ಕಿಚ್ಚಿಟ್ಟು ಸುಟ್ಟು ಹಾಕಿದ್ದಾಳೆ.

36 ವರ್ಷದ ಕನೊಕ್ ವಾನ್ ಎಂಬ ಈಕೆ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ತಮ್ಮ ಪ್ರೇಮದ ಉತ್ತುಂಗದ ಸಮಯದಲ್ಲಿ ಆತನಿಗೆ ಒಲವಿನ ಉಡುಗೊರೆಯಾಗಿ ದುಬಾರಿ ಬೆಲೆಯ ಟ್ರಯಂಫ್​ ಬೈಕ್​ ನೀಡಿದ್ದಳು. ಆಕೆ ಕೊಡಿಸಿರುವ ಈ ಬೈಕ್​ ಬೆಲೆಯೇ ಸುಮಾರು 23 ಲಕ್ಷ ರೂ. ಎನ್ನಲಾಗಿದೆ. ಹೀಗೆ ಇಷ್ಟೊಂದು ದುಬಾರಿ ಕೊಡುಗೆ ಕೊಡುವಷ್ಟು ತೀವ್ರವಾಗಿದ್ದ ಇವರ ಪ್ರೀತಿ ಒಂದು ದಿನ ಮುರಿದು ಬಿದ್ದಿತ್ತು.

ಆದರೆ ಬ್ರೇಕಪ್ ಬಳಿಕವೂ ಆತನನ್ನೇ ಬಯಸಿದ ಈಕೆ ಮತ್ತೆ ಮೊದಲಿನಂತೆ ಜೊತೆಗಿರಲು ಕೋರಿಕೊಂಡರೂ ಆತ ಕ್ಯಾರೇ ಎಂದಿರಲಿಲ್ಲ. ಇದರಿಂದ ಸಿಟ್ಟಾದ ಈಕೆ ಪಾರ್ಕ್ ಮಾಡಲಾಗಿದ್ದ ಆ ದುಬಾರಿ ಬೈಕ್​ ಮೇಲೆ ತೈಲ ಸುರಿದು ಬೆಂಕಿ ಹಚ್ಚಿದ್ದಾಳೆ. ಪರಿಣಾಮವಾಗಿ ಲಕ್ಷಗಟ್ಟಲೆ ಮೌಲ್ಯದ ಬೈಕ್​ ಕಣ್ಮುಂದೆಯೇ ಧಗಧಗನೆ ಉರಿದುಹೋಗಿದೆ. ಜತೆಗೆ ಅಲ್ಲೇ ಪಾರ್ಕಿಂಗ್​ನಲ್ಲಿದ್ದ ಅಕ್ಕಪಕ್ಕದ ಬೈಕ್​ಗಳೂ ಬೆಂಕಿಗೆ ಆಹುತಿಯಾಗಿವೆ.

ಈಕೆಯ ಪ್ರಿಯಕರ ಆ ಬೈಕ್ ನಿಲ್ಲಿಸಲಾಗಿದ್ದ ಪಾರ್ಕಿಂಗ್ ಕಟ್ಟಡಕ್ಕೆ ತಾಕಿಕೊಂಡಂತಿರುವ ಶಾಲೆಯಲ್ಲಿ ಉದ್ಯೋಗಿಯಾಗಿದ್ದಾನೆ. ಆ ಪಾರ್ಕಿಂಗ್ ಕಟ್ಟಡದ ಐದನೇ ಮಹಡಿಯಲ್ಲಿದ್ದ ಬೈಕ್​ಗೆ ಬೆಂಕಿ ಇಟ್ಟಿದ್ದರೂ ಅದೃಷ್ಟವಶಾತ್ ಹತ್ತಿರದಲ್ಲೇ ಇರುವ ಶಾಲಾ ಕಟ್ಟಡಕ್ಕೆ ಅದು ವ್ಯಾಪಿಸುವ ಮೊದಲೇ ಆರಿಸಲ್ಪಟ್ಟಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಸಿಸಿಟಿವಿ ಕ್ಲಿಪ್ಪಿಂಗ್ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಆಕೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಥಾಯ್ಲೆಂಡ್​ನಲ್ಲಿ. (ಏಜೆನ್ಸೀಸ್)