ನ್ಯೂಸ್

ನಾಪತ್ತೆ ಆಗಿದ್ದ ಗಂಡ ಹತ್ತು ವರ್ಷಗಳ ಬಳಿಕ ಪತ್ತೆ; ವೈದ್ಯರನ್ನು ನೋಡಲು ಹೋಗಿದ್ದ ಪತ್ನಿಗೆ ಪತಿಯೇ ಸಿಕ್ಕಿ ಅಚ್ಚರಿ!

ಉತ್ತರಪ್ರದೇಶ: ಆಕೆ ವೈದ್ಯರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿದ್ದಳು. ಆದರೆ ಅಲ್ಲಿ ಆಕೆಗೊಂದು ಭಾರಿ ಅಚ್ಚರಿ ಎದುರಾಗಿತ್ತು. ಏಕೆಂದರೆ ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಪತಿಯೇ ಕಣ್ಣೆದುರಿಗೆ ಇರುವುದು ಕಂಡುಬಂದಿತ್ತು. ಇಂಥದ್ದೊಂದು ವಿಸ್ಮಯ ಉತ್ತರಪ್ರದೇಶದಲ್ಲಿ ನಡೆದಿದೆ.

ಮೋತಿಚಂದ್ ವರ್ಮಾ (44) ಉತ್ತರಪ್ರದೇಶದ ಸುಖ್​ಪುರ ಪ್ರದೇಶದ ದೇವ್​ಕಳಿ ಗ್ರಾಮದ ನಿವಾಸಿಯಾಗಿದ್ದು, ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ. ಆದರೆ ವೈದ್ಯರನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದ ಪತ್ನಿ ಜಾನಕಿದೇವಿಗೆ ಆಶ್ಚರ್ಯ ಎಂಬಂತೆ ಅಲ್ಲಿ ಪತಿಯ ದರ್ಶನವಾಗಿದೆ.

ಕಳೆದ ಶುಕ್ರವಾರ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಜಾನಕಿದೇವಿಗೆ ಅಲ್ಲಿನ ಗೇಟ್ ಬಳಿ ವ್ಯಕ್ತಿಯೊಬ್ಬ ಕೂತಿರುವುದು ಕಾಣಿಸಿತ್ತು. ಹತ್ತಿರ ಹೋಗಿ ನೋಡಿದಾಗ ಆತ ಆಕೆಯ ಪತಿಯೇ ಎಂಬುದು ಖಚಿತವಾಗಿತ್ತು. ಹತ್ತು ವರ್ಷಗಳಿಂದ ನಾಪತ್ತೆಯಾಗಿ ಉದ್ದ ಕೆದರಿದ ಕೂದಲು, ಗಡ್ಡದ ಮೂಲಕ ಮತ್ತೆ ಮೋತಿಚಂದ್ ಸಿಕ್ಕಿ ಇಬ್ಬರ ಪುನರ್ಮಿಲನದ ದೃಶ್ಯದ ವಿಡಿಯೋ ವೈರಲ್ ಆಗಿದೆ.

ಇಬ್ಬರಿಗೂ ಮದುವೆಯಾಗಿ 22 ವರ್ಷಗಳಾಗಿವೆ. ಆದರೆ ಮದುವೆಯಾಗಿ 12 ವರ್ಷಗಳಾಗುತ್ತಿದ್ದಂತೆ ವರ್ಮಾ ನಾಪತ್ತೆ ಆಗಿದ್ದು, ಆತನಿಗಾಗಿ ಜಾನಕಿ ತುಂಬಾ ಹುಡುಕಾಡಿದ್ದಳು. ಅದಾಗ್ಯೂ ಆತನ ಪತ್ತೆ ಆಗಿರಲಿಲ್ಲ. ಆದರೆ ಹತ್ತು ವರ್ಷಗಳ ಬಳಿಕ ಪತಿ ತಾನಾಗೇ ಸಿಕ್ಕಿದ್ದು, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತಡವಿಕೊಂಡಂತಾಗಿದೆ.