ನ್ಯೂಸ್

ಸೇನಾ ವಸತಿಗೃಹದಲ್ಲಿ ಸೈನಿಕನ ಪತ್ನಿ-ಪುತ್ರಿಯ ಸಾವು; ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವ

ನವದೆಹಲಿ: ಸೈನಿಕರೊಬ್ಬರ ಪತ್ನಿ ಹಾಗೂ ಪುತ್ರಿ ಸೇನಾ ಕ್ವಾರ್ಟರ್ಸ್​ನಲ್ಲಿ ಸಾವಿಗೀಡಾಗಿದ್ದು, ಇಬ್ಬರ ಶವವೂ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದೆ. ರಾಜಸ್ಥಾನದ ಜೋಧಪುರದಲ್ಲಿರುವ ಸೇನಾ ವಸತಿಗೃಹದಲ್ಲಿ ಈ ಸಾವು ಸಂಭವಿಸಿದೆ.

ಸೈನಿಕ ರಾಮ್​ಪ್ರಸಾದ್ ಎಂಬವರ ಪತ್ನಿ ರುಕ್ಮೀನಾ (25) ಮತ್ತು ಆಕೆಯ ಪುತ್ರಿ ರಿಧಿಮಾ ಸಾವಿಗೀಡಾದವರು. ಇವರಿಬ್ಬರ ಶವ ಹಾಸಿಗೆ ಮೇಲೆ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಶಾರ್ಟ್ ಸರ್ಕ್ಯೂಟ್​ನಿಂದಾದ ಬೆಂಕಿ ತಗುಲಿ ಅವರು ಸಾವಿಗೀಡಾಗಿದ್ದಾರೆ ಎಂದು ರಾಮ್​ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಸಿಕ್ಕಿಂ ಮೂಲದ ರಾಮ್​ಪ್ರಸಾದ್ ಮೂರು ವರ್ಷಗಳ ಹಿಂದೆ ನೇಪಾಳ ಮೂಲದ ರುಕ್ಮೀನಾಳನ್ನು ಮದುವೆಯಾಗಿದ್ದರು. ಎರಡು ವರ್ಷಗಳ ಹಿಂದೆ ಜೋಧಪುರಕ್ಕೆ ಬಂದ ರಾಮ್​ಪ್ರಸಾದ್, ಅಲ್ಲಿನ ಸೇನಾ ವಸತಿಗೃಹದಲ್ಲಿ ಸಂಸಾರಸಮೇತ ನೆಲೆಸಿದ್ದರು.

ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಈ ಪ್ರಕರಣ ನಡೆದಿದ್ದು, ಆ ಸಮಯದಲ್ಲಿ ರಾಮ್​ಪ್ರಸಾದ್ ಕೂಡ ಮನೆಯಲ್ಲಿದ್ದು, ಅವರ ಕೈಯಲ್ಲಿ ಸುಟ್ಟಗಾಯಗಳಾಗಿವೆ. ರಾಮ್​ಪ್ರಸಾದ್ ಪತ್ನಿ ಪುತ್ರಿಯನ್ನು ಬಚಾವ್ ಮಾಡಲು ಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎಂಬುದು ತಿಳಿದುಬಂದಿದೆ. ಅಷ್ಟಕ್ಕೂ ಪ್ರಕರಣ ಕುರಿತು ಈಗಲೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅದನ್ನಾಧರಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. -ಏಜೆನ್ಸೀಸ್