ನ್ಯೂಸ್

ನಮ್ಮಲ್ಲೊಂದು 'ಹೇಮಾ ಕಮಿಟಿ' ಬರಬೇಕು! ವಾಣಿಜ್ಯ ಮಂಡಳಿಯಲ್ಲಿ ಮೀಟೂ ಪರ-ವಿರೋಧ ಜಟಾಪಟಿ

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಹೊರಬಿದ್ದ ಬೆನ್ನಲ್ಲೇ ಸಾಲು ಸಾಲು ಹಿರಿಯ ನಟಿಯರು ಸೇರಿದಂತೆ ಯುವ ನಟಿಯರು ತಮಗೆ ಸಹ ನಟರು, ನಿರ್ದೇಶಕರು ಹಾಗೂ ನಿರ್ಮಾಕರಿಂದ ಲೈಂಗಿಕ ಕಿರುಕುಳ ಎದುರಾಗಿತ್ತು ಎಂದು ಕ್ಯಾಮರಾ ಮುಂದೆ ಬಹಿರಂಗ ಹೇಳಿಕೆ ನೀಡಿದರು. ಹೆಸರಾಂತ ಹೀರೋಯಿನ್​ಗಳ ಸ್ಫೋಟಕ ಹೇಳಿಕೆಗಳು ಇದೀಗ ಮಾಲಿವುಡ್​ ಸಿನಿ ಇಂಡಸ್ಟ್ರಿಯನ್ನು ಅಕ್ಷರಶಃ ನೆಲಕಚ್ಚುವಂತೆ ಮಾಡಿದೆ. ಸದ್ಯ ಹೇಮಾ ಕಮಿಟಿ ವರದಿಯ ಆಧಾರ ಮೇರೆಗೆ ದೂರನ್ನು ಕೊಟ್ಟಿರುವ ನಟಿಯರನ್ನು ಖುದ್ದಾಗಿ ಮುಖಾಮುಖಿಯಾಗಿ ಭೇಟಿ ಮಾಡ್ತಿರುವ ಕೇರಳದ ಎಸ್​ಐಟಿ ತಂಡ, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು, ತನಿಖೆಗೆ ಮುಂದಾಗುತ್ತಿದೆ. ಸದ್ಯ ಈ ಎಲ್ಲಾ ಬೆಳವಣಿಗೆ ಕಂಡ ಸ್ಯಾಂಡಲ್​ವುಡ್​ ಕೂಡ ನಮ್ಮಲ್ಲೂ ಒಂದು ಹೇಮ ಕಮಿಟಿ ಬರಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಆಗ್ರಹಿಸಿದೆ.

ಇಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೇಮ ಕಮಿಟಿ ವರದಿ ಹೇಗೆ ರಚನೆಯಾಯಿತೋ ಅದೇ ರೀತಿ ನಮ್ಮಲ್ಲಿ ಕೂಡ ಒಂದು ಕಮಿಟಿ ಬರಬೇಕು. ಇದರಿಂದ ನಟಿಯರು ಎದುರಿಸುತ್ತಿರುವ ಸಮಸ್ಯೆಗಳು ಮುಕ್ತವಾಗಿ ಹೊರಬರುತ್ತದೆ ಎಂದು ಕೆಲವರು ಧ್ವನಿ ಎತ್ತಿದ್ದಾರೆ. ಇನ್ನು ಈ ಸಮಸ್ಯೆ ಬಗ್ಗೆ ಮಾತನಾಡಿದ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, "ಶೂಟಿಂಗ್ ಸಂದರ್ಭದಲ್ಲಿ ಏನೇನೋ ನಡೆಯುತ್ತದೆ. ಇಷ್ಟ ಇಲ್ಲದೇ ಇದ್ರೂ ನಟಿಯರು ಕೆಲ ಸೀನ್​ಗಳಲ್ಲಿ ನಟಿಸುತ್ತಾರೆ" ಎಂದರು.

"ಮಹಿಳಾ ಕಲಾವಿದರ ಬಗ್ಗೆ ಎಷ್ಟು ಸೇಫ್ಟಿ ತೆಗೆದುಕೊಳ್ತಾರೆ, ಅವರಿಗೆ ಯಾವೆಲ್ಲಾ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ತಾರೆ? ಎಷ್ಟೋ ದಿನ ಕಾಡುಗಳಲ್ಲಿ, ದೂರದ ಊರುಗಳಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗುತ್ತದೆ. ಅಂತಹ ನಟಿಯರಿಗೆ ಯಾವ ರೀತಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಗೊತ್ತಾಗಬೇಕು. ಒಂದೇ ಸೀನ್​ಗಳನ್ನು ಪದೇ ಪದೇ ಮಾಡಿಸೋದು ಕೂಡ ಒಂದು ರೀತಿ ಬಲವಂತ ಮಾಡಿದಂತೆಯೇ. ಖಾಸಗಿ ದೃಶ್ಯಗಳನ್ನು ಮಾಡುವಾಗ ನಟಿಯರಿಗೆ ಇರಿಸು ಮುರಿಸು ಆಗೋದು ಸಹಜ. ಹಾಗಾಗಿ ಕರ್ನಾಟಕದಲ್ಲಿಯೂ ಹೇಮ ಕಮಿಟಿ ರೀತಿ ಅಗಲೇಬೇಕು" ಎಂದು ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಸದ್ಯ ಚಿತ್ರರಂಗದ ಹಿರಿಯರು, ನಿರ್ಮಾಕರ ಸಂಘ ಮತ್ತು ಮಹಿಳಾ ಅಯೋಗದ ನಡುವೆ ಮಾತಿನ ಚಕಮಕಿ ನಡೆದಿದ್ದು, ಮೀಟೂ ಪ್ರಕರಣಗಳ ಸಂಬಂಧ ಪರ-ವಿರೋಧ ಜಟಾಪಟಿ ಜೋರಾಗಿದೆ. ಸಭೆಯಲ್ಲಿ ಮಾತು ಮೀರಿ ಗಲಾಟೆಗೆ ತಿರುಗುತ್ತಿದ್ದಂತೆ ಗರಂ ಆದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಮಾಧಾನದಿಂದ ಇರುವಂತೆ ಎಷ್ಟೇ ಹೇಳಿದರೂ ಕೂಡ ಕೆಲವು ನಿರ್ಮಾಪಕರು ಶಾಂತರಾಗಿಲ್ಲ.