ನ್ಯೂಸ್

ಔಷಧಿ ಬಾಟಲಿಯನ್ನು ನುಂಗಿ ಸಂಕಷ್ಟಕ್ಕೆ ಸಿಲುಕಿದ ಹಾವು; ಮನಕಲುಕುವ ವಿಡಿಯೋ ವೈರಲ್​

ನವದೆಹಲಿ: ಸಮುದ್ರದ ಆಳದಿಂದ ಹಿಡಿದು ಬೆಟ್ಟ ಗುಡ್ಡಗಳವರೆಗೂ ಪ್ಲಾಸ್ಟಿಕ್​ ಮಯವಾಗಿದ್ದು, ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಎಷ್ಟೇ ಜಾಗೃತಿ ಮೂಡಿಸಿದರು ಜನರು ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಮಾತ್ರ ಬಿಟ್ಟಿಲ್ಲ. ಎಲ್ಲೆಂದರ್ಲಲಿ ಕಸ ಎಸೆಯುವುದರಿಂದ ಪರಿಸರಕ್ಕೆ ಮಾತ್ರವಲ್ಲದೇ ಮೂಕ ಪ್ರಾಣಿಗಳಿಗೂ ಇದರಿಂದ ಹಾನಿಯಾಗುತ್ತಿದೆ. ಆಹಾರವನ್ನು ಅರಸಿ ಬರುವ ಪ್ರಾಣಿಗಳು ಅಲ್ಲಲ್ಲಿ ಎಸೆದಂತಹ ಪ್ಲಾಸ್ಟಿಕ್‌ ತ್ಯಾಜ್ಯ ಸೇವಿಸಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಹಲವು ನಿದರ್ಶನಗಳ ನಮ್ಮ ಕಣ್ಣ ಮುಂದಿವೆ. ಇದೀಗ ಅದೇ ರೀತಿಯ ಘಟನೆಯೊಂದು ಓಡಿಶಾದ ರಾಜಧಾನಿ ಭುವನೇಶ್ವರದಲ್ಲಿ ನಡೆದಿದ್ದು, ಪ್ರಾಣಿಪ್ರಿಯರು ಕಿಡಿಕಾರಿದ್ದಾರೆ.

ಓಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಆಹಾರವೆಂದು ಭಾವಿಸಿ ನಾಗರ ಹಾವೊಂದು ಯಾರೋ ರಸ್ತೆ ಬದಿ ಎಸೆದಿದ್ದ ಔಷಧಿಯ ಬಾಟಲಿಯನ್ನು ನುಂಗಿ ಪರದಾಡಿದೆ. ಕೂಡಲೇ ಈ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸ್ನೇಕ್​ ಹೆಲ್ಪ್​ಲೈನ್​ ಅಧಿಕಾರಿಗಳು ಅದನ್ನು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಅರಣ್ಯ ಇಲಾಖೆಯ ಅಧಿಕಾರಿ ಸುಸಾಂತ ನಂದ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೂ 1,70 ಲಕ್ಷಕ್ಕೂ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಔಷಧಿಯ ಬಾಟಲಿಯನ್ನು ನುಂಗಿದ ಹಾವೊಂದು ಈ ಸಂಕಷ್ಟದಿಂದ ಹೊರ ಬರಲಾರದೆ ನರಳಾಡುತ್ತಿರುವುದನ್ನು ನೋಡಬಹುದಾಗಿದೆ. ಹಾವಿನ ಬಾಯಲ್ಲಿ ಸಿಲುಕ್ಕಿದ್ದಂತಹ ಬಾಟಲಿಯನ್ನು ನಿಧಾನಕ್ಕೆ ಹೊರ ತೆಗೆಯುವುದನ್ನು ನೋಡಬಹುದಾಗಿದೆ.