

ನವದೆಹಲಿ: ಈಚೆಗೆ ಮುಕ್ತಾಯಗೊಂಡ 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿದ್ದು, 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಭಾರತ ಕಪ್ ಗೆದ್ದಿರುವ ವಿಚಾರ ಪಾಕಿಸ್ತಾನದ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಆಟಗಾರರ ಅಥವಾ ತಂಡದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿ ವಿರುದ್ಧ ಆರೋಪ ಒಂದನ್ನು ಮಾಡಿದ್ದು, ಭಾರತದ ಅಭಿಮಾನಿಗಳು ಕಿಡಿಕಾರಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯ ಪ್ಯಾನೆಲ್ ಡಿಸ್ಕಷನ್ನಲ್ಲಿ ಈ ಕುರಿತು ಮಾತನಾಡಿರುವ ಅಖ್ತರ್, ವಿರಾಟ್ ಕೊಹ್ಲಿ ತನ್ನ ಕ್ರೇಜ್ಅನ್ನು ಹೆಚ್ಚಿಸಿಕೊಳ್ಳಲು ಒತ್ತಡದ ಸಂದರ್ಭಗಳನ್ನು ಹುಡುಕುತ್ತಿರುತ್ತಾನೆ ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ವಿಡಿಯೋ ಟೀಮ್ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ವಿರಾಟ್ ಕೊಹ್ಲಿ ಸೂಪರ್ ಸ್ಟಾರ್. ನಾನು ನೋಡಿದ ಪ್ರಕಾರ ಎರಡು ರೀತಿಯ ಬ್ಯಾಟರ್ಗಳು ಇರುತ್ತಾರೆ. ಒಬ್ಬರು ತಂಡ ಸಂಕಷ್ಟಕ್ಕೆ ಸಿಲುಕಿದಾಗ ಎಸ್ಕೇಪ್ ಆಗುವವರು, ಮತ್ತೊಬ್ಬರು ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸುವವರು. ಈ ಪೈಕಿ ಕೊಹ್ಲಿ ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸುವವರ ಪೈಕಿ ಗುರುತಿಸಿಕೊಳ್ಳುತ್ತಾರೆ.
ನಾನು ನೋಡಿದಾ ಹಾಗೆ ವಿರಾಟ್ ಪ್ರತಿಬಾರಿಯೂ ಒತ್ತಡದ ಪರಿಸ್ಥಿತಿಯನ್ನು ಎದುರು ನೋಡುತ್ತಿರುತ್ತಾನೆ. 2022ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಪಾಕ್ ವಿರುದ್ಧ ಪಂದ್ಯದಲ್ಲೂ ಕೊಹ್ಲಿ ಆ ಸಂದರ್ಭಕ್ಕಾಗಿ ಕಾಯುತ್ತಿದ್ದ. ಅಂದು ಪಂದ್ಯವನ್ನು ಗೆಲ್ಲಿಸಿದ್ರೆ ನಾನು ಸೂಪರ್ ಸ್ಟಾರ್ ಆಗ್ತೀನಿ. ದುಡ್ಡು, ಸಾಮಾಜಿಕ ಜಾಲತಾಣದಲ್ಲಿ ನನ್ನ ಕ್ರೇಜ್ ಹೆಚ್ಚಾಗುತ್ತೆ ಎಂಬ ಅರಿವು ಕೊಹ್ಲಿಗೆ ಇತ್ತು. ಆದ್ದರಿಂದಲೇ ಅಂದು ಪಂದ್ಯ ಗೆಲ್ಲಿಸಿದ್ರು. ದೇವರು ಕೂಡ ಕೊಹ್ಲಿಗೆ ಆಶೀರ್ವದಿಸಿದ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತದ ಅಭಿಮಾನಿಗಳು ಈ ರೀತಿಯ ಕ್ಷುಲಕ ಹೇಳಿಕೆಗಳನ್ನು ಕೊಡುವ ಬದಲು ಸುಮ್ಮನೇ ನಿಮ್ಮ ಕೆಲಸ ನೋಡಿಕೊಳ್ಳಿ. ಸಂಕಷ್ಟದ ಸಮಯದಲ್ಲಿ ವಿರಾಟ್ ತಂಡದ ಕೈ ಹಿಡಿದಿದ್ದಾರೆ. ಅವರ ಮೇಲೆ ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಕಮೆಂಟ್ ಮೂಲಕ ತಿರುಗೇಟು ನೀಡಿದ್ದಾರೆ.