ನ್ಯೂಸ್

ರಷ್ಯಾ ಲಸಿಕೆ ಭಾರತದಲ್ಲಿ ಉತ್ಪಾದನೆ; ಖಚಿತಪಡಿಸಿದ ಕೇಂದ್ರ; ವರ್ಷಾಂತ್ಯಕ್ಕೆ 4 ಲಸಿಕೆಗಳು ಸಿಗೋದು ಪಕ್ಕಾ...!

ನವದೆಹಲಿ: ರಷ್ಯಾ ಅಭಿವೃದ್ಧಿಪಡಿಸಿರುವ ಕರೊನಾ ವೈರಸ್​ ನಿಗ್ರಹ ಲಸಿಕೆಯನ್ನು ಭಾರತದಲ್ಲೂ ಪರಿಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಖಚಿತ ಪಡಿಸಿದೆ. ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಹಾಗೂ ಕೋವಿಡ್​ ಲಸಿಕೆ ಕುರಿತ ಕಾರ್ಯಪಡೆ ಮುಖ್ಯಸ್ಥರು ಆಗಿರುವ ಡಾ. ವಿ.ಕೆ. ಪೌಲ್​ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

ರಷ್ಯಾ ಉತ್ಪಾದಿಸಿರುವ ಸ್ಪುಟ್ನಿಕ್​-ವಿ ಲಸಿಕೆಯನ್ನು ಭಾರತದಲ್ಲಿ ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ರಷ್ಯಾ ಸರ್ಕಾರವು ಭಾರತವನ್ನು ಸಂಪರ್ಕಿಸಿದೆ ಎಂದು ಪೌಲ್​ ಮಾಹಿತಿ ನೀಡಿದ್ದಾರೆ.

ಮುಖ್ಯವಾಗಿ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಭಾತದ ನೆರವು ಕೋರಿದೆ. ನಮ್ಮಲ್ಲಿರುವ ಔಷಧ ಕಂಪನಿಗಳ ಮೂಲಕ ಲಸಿಕೆ ಉತ್ಪಾದನೆ ಮಾಡುವುದು ಹಾಗೂ ಭಾರತದಲ್ಲಿ ಈ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ಗೆ ( ಮಾನವರ ಮೇಲೆ ಪ್ರಯೋಗ) ಅವಕಾಶ ಕೋರಿದೆ ಎಂದು ಪೌಲ್​ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ಕೋರಿಕೆಯನ್ನು ಅತ್ಯಂತ ಮಹತ್ವದ್ದೆಂದು ಪರಿಗಣಿಸಿದೆ. ರಷ್ಯಾವನ್ನು ಭಾರತ ಅತ್ಯಂತ ವಿಶೇಷ ಸ್ನೇಹಪೂರ್ವಕ ರಾಷ್ಟ್ರವೆಂದು ಪರಿಗಣಿಸುತ್ತದೆ. ಎರಡೂ ಕಡೆಯಿಂದಲೂ ಈ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೂರನೇ ಹಂತದ ಪ್ರಯೋಗ ನಡೆಯುತ್ತಿರುವ ಹೊರತಾಗಿಯೂ ರಷ್ಯಾ ತನ್ನ ಪ್ರಜೆಗಳಿಗೆ ಸಾರ್ವತ್ರಿಕವಾಗಿ ಈ ಲಸಿಕೆಯನ್ನು ನೀಡಲು ಸಜ್ಜಾಗಿದೆ. ಇದೇ ವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಿದೆ.

ಹೈದರಾಬಾದ್​ನ ಕೋವಾಕ್ಸಿನ್​, ಝೈಡಸ್​ ಕ್ಯಾಡಿಲಾದ ಲಸಿಕೆ, ಪುಣೆಯ ಕೋವಿಶೀಲ್ಡ್​ ಸೇರಿ ಭಾರತದಲ್ಲಿ ವರ್ಷಾಂತ್ಯಕ್ಕೆ ನಾಲ್ಕು ಲಸಿಕೆಗಳು ಸಿಗೋದು ಪಕ್ಕಾ ಅದಂತಾಗಲಿದೆ.