ನ್ಯೂಸ್

ಅನುದಾನಿತ ಶಾಲೆಯಲ್ಲಿ ಓದಿದರೂ, ಐಎಎಸ್ ಗುರಿ ಮುಟ್ಟಿದ ಕೌಶಿಕ್; ಉನ್ನತ ಹುದ್ದೆಯಲ್ಲಿದ್ದು, ದೇಶ ಸೇವೆ ಹಂಬಲ

rameshmysuru

ಬೆಂಗಳೂರು: ಚಿಕ್ಕಮಗಳೂರಿನ ಜಿಲ್ಲೆಯ ಕೊಪ್ಪದ ಗ್ರಾಮೀಣ ಭಾಗದ ಸರ್ಕಾರದ ಅನುದಾನಿತ ಶಾಲೆಯಲ್ಲಿ ಓದಿ, ದೇಶದ ಉನ್ನತ ಅಧಿಕಾರಿಯಾಗುವ ಸಾಧನೆಯನ್ನು ಎಚ್.ಆರ್. ಕೌಶಿಕ್ ತಲುಪಿದ್ದಾರೆ.

ಕುಟುಂಬ ನಿರ್ವಹಣೆಗೆ ಯಾವುದಾದರೂ ಹುದ್ದೆ ಪಡೆದರೆ ಸಾಕು ಎಂಬುವವರ ನಡುವೆ ತಮಗಿದ್ದ, ಗುರಿಯನ್ನು ಸಾಧಿಸಲೇಬೇಕು ಎಂಬ ನಿಟ್ಟಿನಲ್ಲಿ ಛಲಂದಕ ಮಲ್ಲನಾಗಿ ನಿರಂತರ ಅಭ್ಯಾಸ ಮಾಡಿ, ವಿಫಲತೆಗಳನ್ನು ಮೆಟ್ಟಿನಿಂತು 5ನೇ ಅವಕಾಶದಲ್ಲಿ ಕೌಶಿಕ್ ಯುಪಿಎಸ್​ಸಿ ಪರೀಕ್ಷೆಯಲ್ಲಿ 380ನೇ ರ್ಯಾಂಕ್ ಪಡೆದು ಪಡೆದುಕೊಂಡಿದ್ದಾರೆ. ಅವರ ಸಾಧನೆ ಐಎಎಸ್ ಹುದ್ದಗೆ ಹೋಗಬೇಕೆನನ್ನುವವರಿಗೆ ಪೂರಕವಾಗಿದೆ.

ದೇಶ ಸೇವೆ ಛಲ ಸುಮ್ಮನೆ ಕೂರಿಸಲಿಲ್ಲ: ಬೆಂಗಳೂರಿನ ಬಿಐಟಿನಲ್ಲಿ ಇಂಜಿನಿಯರಿಂಗ್ ಮುಗಿಸಿ 3 ವರ್ಷ ಸಿಸ್ಕೋ ಕಂಪನಿಯಲ್ಲಿ ಕೆಲಸ ಮಾಡಿ ಆನಂತರ ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಸತತ ಪ್ರಯತ್ನದ ನಡುವೆ, ಭಾರತೀಯ ಕಂದಾಯ ಸೇವೆ (ಐಆರ್​ಎಸ್) ಹುದ್ದೆ ಪಡೆದು ಕೆಲಸ ಮಾಡುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ಉನ್ನತ ಅಧಿಕಾರದಲ್ಲಿದ್ದು, ದೇಶ ಸೇವೆ ಮಾಡಬೇಕೆಂಬ ಛಲವನ್ನು ಮುಂದುವರೆಸಿದರು. ಈ ಹಿಂದೆ ಐಎಎಸ್ ಹಾಗೂ ಐಪಿಎಸ್ ಕರ್ನಾಟಕ ಕೇಡರ್​ಗೆ ಸಿಗಬೇಕಾಗಿದ್ದ ಅವಕಾಶ ಸ್ವಲ್ಪದರಲ್ಲಿಯೇ ಕೈ ತಪ್ಪಿತ್ತು. ಆದರೆ, ನನ್ನ ಪ್ರಯತ್ನ ಬಿಡದೇ, 2019ನೇ ಸಾಲಿನ ಕೊನೆಯ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಮಯದ ಸದುಪಯೋಗ ಮುಖ್ಯ: ನಾವು ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಪ್ರತಿನಿತ್ಯ ಓದು ನಮ್ಮ ನಿತ್ಯ ಕರ್ಮದ ರೀತಿಯಲ್ಲಿ ಒಂದು ಭಾಗವಾಗಿರಬೇಕು. ದಿನಪತ್ರಿಕೆಗೆಳ ಓದು, ಸರ್ಕಾರ ಹೊರಡಿಸುವ ಹೊಸ ಆದೇಶಗಳು ಮತ್ತು ನೀತಿಗಳ ಅಧ್ಯಯನ, ಉನ್ನತ ಅಧಿಕಾರಿಗಳು ಮತ್ತು ಇಲಾಖೆಯಲ್ಲಿ ಆಗುವಂತಹ ಬದಲಾವಣೆಗಳು ಸೇರಿ ಎಲ್ಲವನ್ನೂ ಸ್ವಲ್ಪ ಬಿಡುವಿನ ಸಮಯದಲ್ಲೂ ಅಭ್ಯಾಸ ಮಾಡುತ್ತಿದ್ದರು. ಕೆಲಸಕ್ಕೆ ಕ್ಯಾಬ್​ನಲ್ಲಿ ಹೋಗುವಾಗಲೆಲ್ಲಾ ವ್ಯಾಸಂಗ ಮಾಡಿದ್ದಾರೆ.

ಶಿಕ್ಷಣ, ಆರೋಗ್ಯ ಸುಧಾರಣೆ ಹಂಬಲ: ಯಾವುದೇ ದೇಶ ಅಭಿವೃದ್ದಿ ಹೊಂದಲು ಶಿಕ್ಷಣ ಮತ್ತು ಆರೋಗ್ಯ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಣಗೊಳಿಸಿ ಸುಧಾರಣೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಕೈಲಾದ ಕಾರ್ಯಗಳನ್ನು ಮಾಡುವುದಾಗಿ ಕೌಶಿಕ್ ವಿಜಯವಾಣಿಯೊಂದಿಗೆ ತಮ್ಮ ಹಂಬಲಗಳನ್ನು ಹಂಚಿಕೊಂಡಿದ್ದಾರೆ.