ನ್ಯೂಸ್

10 ಸೈನಿಕರು ಸೇರಿದಂತೆ 34 ಜನರ ಪ್ರಾಣ ತೆಗೆದ ಭೀಕರ ಕಾಡ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ

ಅಲ್ಜೇರಿಯಾ: ಕಳೆದ ಕೆಲವು ದಿನಗಳಿಂದ ಹರಡುತ್ತಿರುವ ಕಾಡ್ಗಿಚ್ಚಿನಿಂದಾಗಿ 10 ಸಶಸ್ತ್ರ ಪಡೆಗಳ ಸದಸ್ಯರು ಸೇರಿದಂತೆ ಕನಿಷ್ಠ 34 ಜನರು ಮೃತಪಟ್ಟಿರುವ ಘಟನೆ ಅಲ್ಜೇರಿಯಾ ನಡೆದಿದೆ.

40°Cಗಿಂತ ಹೆಚ್ಚುತ್ತಿರುವ ತಾಪಮಾನವು ಮೆಡಿಟರೇನಿಯನ್‌ನ ಎರಡೂ ಬದಿಯಲ್ಲಿರುವ ಉತ್ತರ ಆಫ್ರಿಕಾದ ದೇಶಗಳಲ್ಲಿ ಬೆಂಕಿಯನ್ನು ಹುಟ್ಟುಹಾಕಿದ್ದು, ಅಲ್ಜೇರಿಯಾ ದೇಶವು ಇದರಿಂದ ತತ್ತರಿಸಿದೆ. ಸುಮಾರು 8,000 ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತರಲು ಶ್ರಮಿಸುತ್ತಿದ್ದು, ಮತ್ತೊಂದೆಡೆ ಸೈನಿಕರು ಜನರ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಶಾಲೆಯಲ್ಲೇ ಮುತ್ತಿಟ್ಟ ಶಿಕ್ಷಕ: ಗ್ರಾಮಸ್ಥರು ಕೆಂಡಾಮಂಡಲ

ಸಚಿವಾಲಯದ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ತಾಪಮಾನವು ದಾಖಲೆಯ 48 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದರಿಂದಾಗಿ 16 ಪ್ರಾಂತ್ಯಗಳಲ್ಲಿ 97ಕ್ಕೂ ಹೆಚ್ಚು ಕಡೆಗೆ ಬೆಂಕಿಗೆ ಕಾಣಿಸಿಕೊಂಡಿದೆ. ಈ ಪ್ರದೇಶಗಳಲ್ಲಿನ ಸಾವಿರಾರು ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ.

ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಮೆಡಿಟರೇನಿಯನ್ ಜಾಗತಿಕ ಹಾಟ್‌ಸ್ಪಾಟ್ ಆಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ಪ್ರದೇಶವು ಜಾಗತಿಕ ಸರಾಸರಿಗಿಂತ ವೇಗವಾಗಿ ಬೆಚ್ಚಗಾಗುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ ಆಗಾಗ್ಗೆ ಶಾಖದ ಅಲೆಗಳು, ಕಾಡ್ಗಿಚ್ಚು, ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳಿಗೆ ಒಳಗಾಗುತ್ತದೆ ಎಂದು ಯುನೈಟೆಡ್ ನೇಷನ್ಸ್ ಇಂಟರ್ ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (IPCC) ಎಚ್ಚರಿಸಿದೆ.(ಏಜೆನ್ಸೀಸ್​​​)