ನವದೆಹಲಿ: ದೇಶದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಕರೊನಾ ಸೋಂಕಿನ ವಿರುದ್ಧ ಔಷಧ ಕಂಡುಹಿಡಿದಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಇದನ್ನು ಈಗಾಗಲೇ ಪ್ರಾಯೋಗಿಕವಾಗಿ ಉಚಿತವಾಗಿ ಕೆಲವು ಆಸ್ಪತ್ರೆಗಳಿಗೆ ವಿತರಿಸಲಾಗಿದ್ದು, ಇದೀಗ ಇದರ ಮಾರುಕಟ್ಟೆ ಬೆಲೆ ಏನಿರಲಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ಡಿಆರ್ಡಿಒ ಅಧೀನದ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆ್ಯಂಡ್ ಅಲೈಡ್ ಸೈನ್ಸಸ್ ಕರೊನಾ ಸೋಂಕಿತರಿಗಾಗಿ '2 ಡಿಯಾಕ್ಸಿ ಡಿ ಗ್ಲುಕೋಸ್' ಅಥವಾ ಸರಳವಾಗಿ ಹೇಳುವುದಾದರೆ 2-ಡಿಜಿ ಎಂಬ ಔಷಧವನ್ನು ಕಂಡುಹಿಡಿದಿದೆ. ಕೆಲವು ದಿನಗಳ ಹಿಂದೆ ಇದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಂದಷ್ಟು ಆಸ್ಪತ್ರೆಗಳಿಗೆ ಉಚಿತವಾಗಿ ವಿತರಣೆ ಮಾಡಿಸುವ ಮೂಲಕ ಈ ಔಷಧವನ್ನು ಲೋಕಾರ್ಪಣೆ ಮಾಡಿದ್ದರು.
ಇದೀಗ ಈ ಔಷಧದ ಮಾರುಕಟ್ಟೆ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯೊಂದು ಮೂಲಗಳ ಮೂಲಕ ಬಹಿರಂಗಗೊಂಡಿದೆ. ಡಾ.ರೆಡ್ಡಿಸ್ ಸಂಸ್ಥೆ ಮೂಲಕ ಈ ಔಷಧ ಮಾರುಕಟ್ಟೆಯಲ್ಲಿ ಲಭ್ಯ. ಇದು ಪುಡಿಯ ರೂಪದಲ್ಲಿ ಸ್ಯಾಚೆಟ್ನಲ್ಲಿ ಸಿಗಲಿದ್ದು, ಸೋಂಕಿತರು ನೀರಿನಲ್ಲಿ ಕರಗಿಸಿಕೊಂಡು ಕುಡಿಯುವಷ್ಟು ಸರಳರೂಪದ ಮದ್ದು. ಸದ್ಯ ಈ ಔಷಧದ ಒಂದು ಸ್ಯಾಚೆಟ್ಗೆ 990 ರೂ. ನಿಗದಿ ಪಡಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.