ಚೆನ್ನೈ: ಸಂಚಾರಿ ನಿಯಮ ಉಲ್ಲಂಘನೆಯ ನೆಪದಲ್ಲಿ ಪೊಲೀಸರು ಪದೇಪದೆ ಬೈಕ್ ಸವಾರರನ್ನು ತಡೆದರೆ ಅದೊಂದು ರೀತಿಯಲ್ಲಿ ಕೆಟ್ಟ ಸುದ್ದಿ ಎನ್ನಬಹುದು. ಆದರೆ, ಇಲ್ಲಿ ಬೈಕ್ ಸವಾರನನ್ನು ತಡೆದ ತಮಿಳುನಾಡು ಪೊಲೀಸ್, ಸವಾರನಿಗೆ ಪರೋಪಕಾರಿಯಾಗುವ ಅವಕಾಶವನ್ನು ನೀಡಿದ್ದು, ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಹೃದಯ ಮುಟ್ಟುವಂತಿದೆ.
ವಿವರಣೆಗೆ ಬರುವುದಾದರೆ, ಬೈಕ್ ಸವಾರ ತಮಿಳುನಾಡಿನ ತೆಂಕಾಸಿ ಹೋಗುತ್ತಿರುತ್ತಾನೆ. ಅಂದಹಾಗೆ ಈ ವಿಡಿಯೋವನ್ನು ಅನ್ನಿಅರುಣ್ (AnnyArun) ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ ಮಾಡಲಾಗಿದೆ. ವಿಡಿಯೋದಲ್ಲಿ ಬೈಕ್ ಸವಾರನ್ನು ತಡೆಯುವ ಪೊಲೀಸ್, ನೀನು ಕರ್ನಾಟಕದವನಾ? ಎಂದು ಪ್ರಶ್ನಿಸುತ್ತಾರೆ. ಬೈಕ್ ಸವಾರ ಹೌದು ಎನ್ನುತ್ತಾನೆ.
ಬಳಿಕ ಪೊಲೀಸ್ ಪೇದೆ ಮಾತನಾಡಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ತಮಿಳುನಾಡು ಸಾರಿಗೆ ಬಸ್ ಅನ್ನು ತೋರಿಸಿ, ನೋಡು ಆ ಬಸ್ಸಿನಲ್ಲಿದ್ದ ಹಿರಿಯ ಮಹಿಳೆ ತನ್ನ ಔಷಧಿಯ ಬಾಟಲ್ ಅನ್ನು ಬೀಳಿಸಿಕೊಂಡಿದ್ದಾರೆ. ನೀನು ಬಸ್ ಚೇಸ್ ಮಾಡಿ ಈ ಔಷಧವನ್ನು ಆ ಅಜ್ಜಿಗೆ ತಲುಪಿಸುಬಿಡು ಎನ್ನುತ್ತಾರೆ.
ಔಷಧ ತೆಗೆದುಕೊಳ್ಳುವ ಬೈಕ್ ಸವಾರ ಬಸ್ ಚೇಸ್ ಮಾಡಿ ಡ್ರೈವರ್ ಪಕ್ಕಕ್ಕೆ ತೆರಳಿ ಸ್ವಲ್ಪ ಬಸ್ ನಿಲ್ಲಿಸುವಂತೆ ಕೇಳಿಕೊಳ್ಳುತ್ತಾನೆ. ಬಳಿಕ ಡ್ರೈವರ್ ಬಸ್ ನಿಲ್ಲಿಸಿದಾಗ ಔಷಧ ಬಾಟಲ್ ತೆಗೆದು ಅದನ್ನು ಕಳೆದುಕೊಂಡ ಮಹಿಳೆಗೆ ಕೊಡುತ್ತಾನೆ.
ಇನ್ನು ವಿಡಿಯೋವನ್ನು 3 ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ಶೇರ್ ಮಾಡಲಾಗಿದೆ. ಈಗಾಗಲೇ ವಿಡಿಯೋವನ್ನು 2 ಲಕ್ಷ 70 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿರುವ ಬಹುತೇಕರು ಉತ್ತಮ ಕ್ಷಣಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕನ್ನಡಿಗರು ಮತ್ತು ತಮಿಳಿಗರ ಪಾಲಿಗೆ ಈ ವಿಡಿಯೋ ವಿಶೇಷ ಅರ್ಥವನ್ನು ನೀಡಿದೆ. (ಏಜೆನ್ಸೀಸ್)