ಮುಂಬೈ: ಯಾವುದೇ ವೃತ್ತಿಯಿರಲಿ ಜೀವನ ನಡೆಸಲು ಹಣ ಬಹಳ ಮುಖ್ಯ. ಸಣ್ಣ ಸಂಬಳವೇ ಇರಲಿ ದೊಡ್ಡ ಸಂಭಾವನೆಯೇ ಆಗಲಿ ಒಟ್ಟಿನಲ್ಲಿ ಸಂಪಾದನೆ ಅತೀ ಮುಖ್ಯ ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಚಿತ್ರೋದ್ಯಮದಲ್ಲಿ ಆರಂಭಿಕ ದಿನಗಳು ಪ್ರತಿಯೊಬ್ಬ ಕಲಾವಿದನಿಗೂ ಬಹಳ ಕಷ್ಟಕರವಾಗಿರುತ್ತದೆ. ಹೆಸರು ಮಾಡುವ ಉದ್ದೇಶದ ಜತೆಗೆ ಉತ್ತಮವಾಗಿ ಅಭಿನಯಿಸಿ, ಸಿನಿಪ್ರೇಕ್ಷಕರಿಂದ ಹಿಡಿದು ನಿರ್ದೇಶಕರು, ನಿರ್ಮಾಪಕರಿಂದ ಗುರುತಿಸಲ್ಪಡಬೇಕು ಎಂಬ ದೊಡ್ಡ ಕನಸೇ ಹೊತ್ತಿರುತ್ತಾರೆ. ನಟ-ನಟಿಯಾಗಿ ಚಿತ್ರರಂಗಕ್ಕೆ ಬಂದಮೇಲೆ ಹಣಕ್ಕಿಂತ ಪಾತ್ರದ ಮೇಲೆಯೇ ಹೆಚ್ಚು ಕಣ್ಣಿಡುವವರ ಮಧ್ಯೆ ಇಲ್ಲೊಬ್ಬರು ಸ್ಟಾರ್ ನಟರು ತಾವು ಹಣಕ್ಕಾಗಿಯೇ ಸಿನಿಮಾ ಮಾಡಿದ್ದು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಈ ಹೇಳಿಕೆ ನೀಡಿದ ನಟ ಬೇರಾರು ಅಲ್ಲ ಅವರು ಬಾಲಿವುಡ್ ಚಿತ್ರರಂಗದ ಹಿರಿಯ ನಟ ನವಾಜುದ್ದೀನ್ ಸಿದ್ದಿಕಿ. ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ವಿಶೇಷ ಅಭಿಮಾನಿಗಳ ಬಳಗವನ್ನು ಹುಟ್ಟುಹಾಕಿರುವ ಸ್ಟಾರ್ ನಟ, ಕಳೆದ ವರ್ಷ ಡಿಸೆಂಬರ್ನಲ್ಲಿ ತೆರೆಕಂಡಿದ್ದ ವಿಕ್ಟರಿ ವೆಂಕಟೇಶ್ ನಟನೆಯ 'ಸೈಂಧವ್' ಸಿನಿಮಾದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದಾರೆ.
ಸದ್ಯ ಈ ವರ್ಷ ನವಾಜುದ್ದೀನ್ ನಟಿಸಿದ ಸಿನಿಮಾಗಳು ಯಾವುದು ಇಲ್ಲಿಯವರೆಗೆ ತೆರೆಕಂಡಿಲ್ಲ ಎಂಬುದು ಗಮನಾರ್ಹ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿ, ಹಲವು ಕುತೂಹಲಕಾರಿ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. "ನಾನು ದಕ್ಷಿಣ ಭಾರತದ ಸಿನಿಮಾಗಳನ್ನು ಮಾಡಿದ್ದು ಕೇವಲ ಹಣಕ್ಕಾಗಿ ಮಾತ್ರ. ಅದರಲ್ಲೂ ನನಗೆ ಬೇರೆ ಭಾಷೆಗಳು ತಿಳಿದಿಲ್ಲ, ನನ್ನ ಡೈಲಾಗ್ಗಳನ್ನು ಕಂಠಪಾಠ ಮಾಡಿಕೊಳ್ಳುತ್ತಿದ್ದೆ" ಎಂದು ಹೇಳಿದರು.
"ಹೆಚ್ಚು ಸಂಪಾದನೆ ಮಾಡುವ ಉದ್ದೇಶದಿಂದಲೇ ಮಾಡಿದ ಚಿತ್ರಗಳಲ್ಲಿ ರಜನಿಕಾಂತ್ ಅವರ 'ಪೆಟ್ಟಾ' ಸಿನಿಮಾ ಕೂಡ ಒಂದು. ಕಾರ್ತಿಕ್ ಸುಬ್ಬರಾಜ ನಿರ್ದೇಶನದ ಈ ಚಿತ್ರದ ಭಾಗವಾಗಲು ದೊಡ್ಡ ಮೊತ್ತದ ಸಂಭಾವನೆಯೇ ಕಾರಣ. ಅದಕ್ಕಾಗಿಯೇ ಪೆಟ್ಟಾ ಚಿತ್ರದಲ್ಲಿ ಅಭಿನಯಿಸಿದೆ. ನನ್ನ ಪಾತ್ರ ಇಷ್ಟವಾಗದಿದ್ದರೂ ಸಹ ದುಬಾರಿ ಮೊತ್ತದ ಸಂಭಾವನೆ ಸಿಗುತ್ತದೆ ಎಂದು ನಟಿಸಲು ಒಪ್ಪಿಕೊಂಡೆ" ಎಂದು ನವಾಜುದ್ದೀನ್ ಓಪನ್ ಆಗಿ ಹೇಳಿದ್ದಾರೆ,(ಏಜೆನ್ಸೀಸ್).