ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಉರುಳಾಗಿ ಪರಿಣಮಿಸಿದ್ದು, ಸಿಎಂ-ಡಿಸಿಎಂಗೆ ದೊಡ್ಡ ತಲೆನೋವನ್ನು ತಂದೊಡ್ಡಿದೆ. ಇತ್ತ ಪ್ರಕರಣದ ಲಾಭ ಪಡೆಯಲು ಮುಂದಾಗಿರುವ ವಿಪಕ್ಷ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಮಾತನಾಡಿದ ವಿಜಯೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿರುವುದನ್ನು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳೇ ಹಗರಣ ಮಾಡಿದ್ದಾರೆ ಎನ್ನುತ್ತಿದ್ದಾರೆ. ಒಂದು ವೇಳೆ ಅಧಿಕಾರಿಗಳು ಹಗರಣ ಮಾಡಿದ್ದರೆ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರು ರಾಜೀನಾಮೆಯನ್ನು ಸಿಎಂ ಕೊಡಿಸಿದ್ದಾರೆ. ಶಾಸಕರಾದ ನಾಗೇಂದ್ರ ಹಾಗೂ ದದ್ದಲ್ ಅವರನ್ನು ಕಾಂಗ್ರೆಸ್ ಸರ್ಕಾರ ರಕ್ಷಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ತಮ್ಮ ಕುಟುಂಬಸ್ಥರಿಗಾಗಿ ನಿಯಮವನ್ನು ಗಾಳಿಗೆ ತೂರಿ ನಿವೇಶನ ಪಡೆದಿದ್ದಾರೆ. ಹಗರಣವನ್ನು ಬೆಳಕಿಗೆ ತಂದ ಆರ್ಟಿಐ ಕಾರ್ಯಕರ್ತರನ್ನು ಜೈಲಿಗೆ ಹಾಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಆಡಳಿತ ನೋಡಿ ಆಶ್ಚರ್ಯ ಪಡುವಂತಾಗಿದೆ. ಅಷ್ಟು ಹಗರಣಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ಬಗ್ಗೆ ನಾವು ಸದನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಈ ರೀತಿಯ ಕಾರ್ಟೂನ್ಗಿರಿ ಒಳ್ಳೆಯದಲ್ಲ; ಇಂಜಮಾಮ್ ಆರೋಪಕ್ಕೆ ಖಡಕ್ ತಿರುಗೇಟು ಕೊಟ್ಟ ಶಮಿ
ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅಹಿಂದ ವರ್ಗದ ವ್ಯಕ್ತಿಯೊಬ್ಬರು ಸಿಎಂ ಆಗಿರುವುದನ್ನು ಸಹಿಸದೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಹಗರಣಗಳನ್ನ ಮುಚ್ಚಿ ಹಾಕಲು ಸಿಎಂ ಮುಂದಾಗಿದ್ದಾರೆ. ನಾಗೇಂದ್ರ ಬಾಯಿ ಬಿಟ್ಟರೆ ಹಗರಣಗಳ ಮೂಲ ಸಿಎಂ ಹಾಗೂ ಡಿಸಿಎಂ ಬುಡಕ್ಕೆ ಬರುತ್ತದೆ. ಸದನದ ನಡುವೆಯೂ ಪತ್ರಿಕಾಗೋಷ್ಠಿ ಮಾಡಿ ತಮ್ಮನ್ನು ತಾವೇ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ. ಇಂತಹ ಅಸಮರ್ಥ ಸಿಎಂ ಇದ್ದರೆ ಅಧಿಕಾರಿಗಳು ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.
ಜಾರಿ ನಿರ್ದೇಶನಾಲಯ ಭ್ರಷ್ಟಾಚಾರ ಆಗಿದೆ. ಹಗರಣದ ದುಡ್ಡಲ್ಲಿ ಹೆಂಡ ಖರೀದಿ ಮಾಡಿದ್ದಾರೆ ಎಂದು ಹೇಳಿದೆ. ಅಸ್ತಿತ್ವವೇ ಇಲ್ಲದ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ದೇಶದ ಇತಿಹಾಸಲ್ಲಿ ಈ ತರದ ಹಗರಣ ಆಗಿಲ್ಲ. ಅಂತಹ ಹಗರಣ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲೇ ಆಗಿದೆ. ಸಿಎಂ ಸಿದ್ದರಾಮಯ್ಯ ಅವರೇ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.