ನವದೆಹಲಿ: ಈ ಬಾರಿಯ ಚುಟುಕು ವಿಶ್ವ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟ್ ತಂಡವು ಹೀನಾಯ ಪ್ರದರ್ಶನದಿಂದಾಗಿ ಸೂಪರ್ 08 ಹಂತ ಪ್ರವೇಶಿಸುವಲ್ಲಿ ವಿಫಲವಾಗಿ ತೀವ್ರವಾಗಿ ಟೀಕೆಗೆ ಗುರಿಯಾಗಿತ್ತು. ತಮ್ಮ ತಂಡದ ಪ್ರದರ್ಶನದ ಬಗ್ಗೆ ಮಾತನಾಡದೆ ಟಿ20 ವಿಶ್ವಚಾಂಪಿಯನ್ನರ ವಿರುದ್ಧ ಆರೋಪ ಮಾಡುತ್ತ ಟೀಕೆಗೆ ಗುರಿಯಾಗಿರುವ ಮಾಜಿ ಆಟಗಾರರ ವಿರುದ್ಧ ಹಲವರು ಕಿಡಿಕಾರಿದ್ದರು.
09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಹಾಲಿ ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದರು. ವೇಗಿ ಅರ್ಷದೀಪ್ ಸಿಂಗ್ ಬಾಲ್ ಟ್ಯಾಂಪರಿಂಗ್ ಮಾಡಿದ್ಧಾರೆ ಎಂದು ಇಂಜಮಾಮ್ ಆರೋಪಿಸಿದ್ದರು. ಇದೀಗ ಇದಕ್ಕೆ ಸಂಬಂಧಿಸಿದಂತೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ ಶಮಿ ಪ್ರತಿಕ್ರಿಯಿಸಿದ್ದು, ಮಾಜಿ ನಾಯಕನಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಪ್ರಕರಣ; ಕಾಂಗ್ರೆಸ್ ಶಾಸಕನನ್ನು ಬಂಧಿಸಿದ ED
ಖಾಸಗಿ ವಾಹಿನಿ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶಮಿ, ನನ್ನ ಕೈಗೆ ಬಾಲ್ ಒಂದನ್ನು ಕೊಟ್ಟು ನೋಡಿ. ಟ್ಯಾಂಪರಿಂಗ್ ಮಾಡಿದರೆ ಉಪಯೋಗವಿದೆಯಾ ಅಥವಾ ಇಲ್ಲವಾ ಎಂಬುದು ತೋರಿಸಿಕೊಡುತ್ತೇನೆ. ಅರ್ಷದೀಪ್ ರಿವರ್ಸ್ ಸ್ವಿಂಗ್ ಹೇಗೆ ಎಸೆದರು ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕರು ಪ್ರಶ್ನಿಸಿದ್ದರು. ಇಂಜಮಾಮ್ ಅವರೇ ನಿಮ್ಮ ವಿರುದ್ಧ ಯಾರು ಚೆನ್ನಾಗಿ ಆಡುತ್ತಾರೋ ಮೊದಲು ಅವರನ್ನು ಟಾರ್ಗೆಟ್ ಮಾಡಿ ಆರೋಪ ಮಾಡುವುದನ್ನು ನಿಲ್ಲಿಸಿ.
ಒಂದು ವೇಳೆ ನಿಮ್ಮ ತಂಡದ ಆಟಗಾರರು ಇದೇ ರಿವರ್ಸ್ ಸ್ವಿಂಗ್ ಎಸೆದರೆ ಉತ್ತಮ ಪ್ರದರ್ಶನ ಎಂದು ಹೊಗಳುವ ನೀವು ಬೇರೆ ತಂಡದವರು ಮಾಡಿದಾಗ ಯಾಕೆ ಪ್ರಶಂಶಿಸುವುದಿಲ್ಲ. ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದ್ದು, ನಿಮ್ಮಿಂದ ಈ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಈ ರೀತಿ ಕಾರ್ಟೂನ್ಗಿರಿ ಹೇಳಿಕೆಗಳಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪಾಕಿಸ್ತಾನದ ಮಾಜಿ ನಾಯಕನಿಗೆ ಖಡಕ್ ತಿರುಗೇಟು ನೀಡಿದ್ದಾರೆ.