ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವ ಹಾಗೂ ಗೊಂದಲ ಮೂಡಿಸುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಗೊಂದಲ’ಕ್ಕೀಡುಮಾಡಿದೆ.
ಜೆನ್ ಜೆಂಟಲ್ಮನ್ ಎಂಬುವರು ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ನಾಲ್ಕು ಮಂದಿ ಇದ್ದಾರೆ ಎಂಬುದನ್ನು ನಿಜಕ್ಕೂ ನನ್ನಿಂದ ನಂಬಲೂ ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಫೋಟೋ ಭಾರಿ ವೈರಲ್ ಆಗಿದ್ದು, ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 35 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಗಿಟ್ಟಿಸಿಕೊಂಡಿದೆ.
ಫೋಟೋದಲ್ಲಿ ಏನಿದೆ?: ಪಾದಯಾತ್ರಿಗಳ ಗುಂಪೊಂದು ಬೆಟ್ಟದ ಕೇಂದ್ರ ಭಾಗವೊಂದಕ್ಕೆ ಆಗಮಿಸಿ, ವಿಶ್ರಾಂತಿ ಪಡೆಯುವಾಗ ಚಿಯರ್ ಅಪ್ ಮಾಡಲು ತಮ್ಮ ಕಿಸೆಯಿಂದ ಬಾಟಲ್ಗಳನ್ನು ತೆರೆಯುತ್ತಾರೆ. ಇದೇ ಚಿತ್ರ ಇದೀಗ ನೆಟ್ಟಿಗರನ್ನು ಗೊಂದಲಕ್ಕೆ ದೂಡಿದೆ. ಏಕೆಂದರೆ ಫೋಟೋದಲ್ಲಿ ನಾಲ್ಕು ಬಾಟಲ್ಗಳು ಕಾಣುತ್ತಿದೆ. ಆದರೆ, ಮೂರೇ ಕೈಗಳು ಮಾತ್ರ ನೋಡುಗರಿಗೆ ಗೋಚರವಾಗುತ್ತಿದೆ. ಹಾಗಾದರೆ ಇನ್ನೊಂದು ಕೈ ಎಲ್ಲಿ ಎಂಬುದೇ ಅನೇಕರ ಪ್ರಶ್ನೆಯಾಗಿದ್ದು, ಇದಕ್ಕೆ ಉತ್ತರವೂ ಮುಂದಿದೆ...
ಫೋಟೋ ಬಗ್ಗೆ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಮಂದಿ ಇದ್ದಾರೆ ಎಂಬುದನ್ನು ನಂಬಲು ನನ್ನಿಂದ ಆಗಲೇ ಇಲ್ಲ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದರೆ, ಜೂಮ್ ಮಾಡುವವರೆಗೂ ನನಗೆ ಇನ್ನೊಂದು ಕೈ ಇರುವುದನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ ಎಂದು ಮತ್ತೊಬ್ಬ ನೆಟ್ಟಿಗ ಹುಬ್ಬೇರಿಸಿದ್ದಾರೆ. ಹೀಗೆ ಅನೇಕರು ಫೋಟೋ ಕುರಿತು ಕಾಮೆಂಟ್ ಮಾಡಿದ್ದಾರೆ.
ಅಸಲಿಗೆ ಫೋಟೋದಲ್ಲಿರುವುದು ನಾಲ್ಕು ಮಂದಿ. ಮೂವರ ಕೈ ಸ್ಪಷ್ಟವಾಗಿ ಕಾಣುತ್ತದೆ. ಆದರೆ, ನಾಲ್ಕನೆ ವ್ಯಕ್ತಿಯ ಕೈ ಹಿನ್ನೆಲೆ ಚಿತ್ರಣಕ್ಕೆ ಹೊಂದಿಕೊಂಡಿರುವುದರಿಂದ ಗೋಚರವಾಗುವುದಿಲ್ಲ. ಆದರೆ, ಜೂಮ್ ಮಾಡಿ ನೋಡಿದರೆ ಸ್ಪಷ್ಟವಾಗಿ ಕಾಣುತ್ತದೆ. (ಏಜೆನ್ಸೀಸ್)