

ಬೆಂಗಳೂರು: ಗ್ರೆಟಾ ಟೂಲ್ಕಿಟ್ ಪ್ರಕರಣದಲ್ಲಿ ಬಂಧಿತಳಾದ ದಿಶಾ ರವಿ ಬಗ್ಗೆ ಇದೀಗ ಅನೇಕ ರೀತಿಯ ಸುದ್ದಿಗಳು ಹರಿದಾಡಲಾರಂಭಿಸಿವೆ. ದಿಶಾ ಹಿಂದೂ ಅಲ್ಲ ಆಕೆ ಕೇರಳದ ಸಿರಿಯನ್ ಕ್ರಿಶ್ಚಿಯನ್ ಎಂದು ಸಾವಿರಾರು ಜನರು ಟ್ವೀಟ್ ಮಾಡಿದ್ದಾರೆ. ಈ ಕುರಿತಾಗಿ ಆಕೆಯ ಕುಟುಂಬ, ಸ್ನೇಹಿತರು ಹೇಳಿದ್ದೇನು ಎನ್ನುವುದು ಇಲ್ಲಿದೆ...
ದಿಶಾ ಹಿಂದೂ ಅಲ್ಲ ಕ್ರಿಶ್ಚಿಯನ್ ಎನ್ನುವ ಮಾತನ್ನು ಆಕೆಯ ಕುಟುಂಬಸ್ಥರು ಮತ್ತು ಸ್ನೇಹಿತರು ತಳ್ಳಿ ಹಾಕಿದ್ದಾರೆ. ದಿಶಾಳ ಪೂರ್ತಿ ಹೆಸರು ದಿಶಾ ಅಣ್ಣಪ್ಪ ರವಿ. ಆಕೆ ಲಿಂಗಾಯತ ಜನಾಂಗಕ್ಕೆ ಸೇರಿದವಳು. ಆದರೆ ಇದುವರೆಗೆ ಆಕೆ ಯಾವುದೇ ಧರ್ಮವನ್ನು ಪರಿಪಾಲಿಸಿಕೊಂಡು ಬಂದಿಲ್ಲ. ಆಕೆಯ ಪ್ರೀತಿ ಏನಿದ್ದರೂ ಅದು ಪರಿಸರದ ಮೇಲೆ. ಆಕೆಯನ್ನು ಅಪಪ್ರಚಾರ ಮಾಡುವ ಸಲುವಾಗಿ ಯಾರೋ ಕುತಂತ್ರಿಗಳು ಈ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಈ ವಿಚಾರದಲ್ಲಿ ಧರ್ಮವನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ ಎಂದು ಆಕೆಯ ಕುಟುಂಬ ಸ್ನೇಹಿತ ಮತ್ತು ವಕೀಲ ಪ್ರಸನ್ನ ಆರ್ ಹೇಳಿದ್ದಾರೆ. ಆಕೆಯ ಮೂಲ ಊರು ತುಮಕೂರಿನ ತಿಪಟೂರು. ಆಕೆಯ ತಂದೆಯ ಹೆಸರು ರವಿ ಹಾಗೂ ತಾಯಿಯ ಹೆಸರು ಮಂಜುಳಾ ನಂಜಯ್ಯ ಎಂದು ಅವರು ತಿಳಿಸಿದ್ದಾರೆ.
ದಿಶಾ ಹೋರಾಟಗಳಿಗೆ ವಿದೇಶಗಳಿಂದ ಹಣ ಪಡೆಯುತ್ತಿದ್ದಳು ಎನ್ನುವ ವಿಚಾರಕ್ಕೂ ಆಕೆಯ ಕೆಲ ಸ್ನೇಹಿತರು ಉತ್ತರ ನೀಡಿದ್ದಾರೆ. ಯಾವುದೇ ಹೋರಾಟ ಅಥವಾ ಸ್ವಯಂ ಸೇವಕ ಕೆಲಸಕ್ಕೆ ಸ್ವಯಂ ಸೇವಕರೇ ಹಣ ಹಾಕಿಕೊಳ್ಳುತ್ತಿದ್ದರು. ಅದನ್ನು ಬಿಟ್ಟು ಹಣಕ್ಕೆ ಬೇರಾವುದೇ ಮೂಲ ಇರಲಿಲ್ಲ ಎಂದು ಆಕೆಯೊಂದಿಗೆ ಸ್ವಯಂ ಸೇವಕ ಕೆಲಸಗಳಲ್ಲಿ ಪಾಲ್ಗೊಂಡ ಒಬ್ಬ ಸ್ನೇಹಿತರು ಹೇಳಿದ್ದಾರೆ.
ದಿಶಾ ಹಿಂದೂವಲ್ಲ ಕ್ರಿಶ್ಚಿಯನ್ ಎನ್ನುವ ಟ್ವೀಟ್ಗಳು ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಬೆಳಗ್ಗೆ 10 ಗಂಟೆಯೊಳಗೆ ಸುಮಾರು 10 ಸಾವಿರ ಮಂದಿ ಆ ಕುರಿತಾಗಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)