ನ್ಯೂಸ್

ಉದ್ದ ಕೂದಲು ಬಿಟ್ಟಿದ್ದಕ್ಕೇ ಅರೆಸ್ಟ್! ಪಾಕಿಸ್ತಾನದಲ್ಲಿ ರಂಗಭೂಮಿ ಕಲಾವಿದನಿಗೆ ಕೊಟ್ಟ ಶಿಕ್ಷೆ ಹೇಗಿದೆ ನೋಡಿ...

ಇಸ್ಲಾಮಾಬಾದ್: ಸಾಮಾನ್ಯವಾಗಿ ರಂಗಭೂಮಿ ಕಲಾವಿದರು ಉದ್ದ ಕೂದಲು ಬಿಡುವುದನ್ನು ನೋಡಿರುತ್ತೀರಿ. ಆದರೆ ನಮ್ಮ ನೆರೆ ದೇಶ ಪಾಕಿಸ್ತಾನದಲ್ಲಿ ಈ ರೀತಿ ಉದ್ದ ಕೂದಲು ಬಿಟ್ಟವರನ್ನು ಕಂಡರೆ ಆಗುವುದಿಲ್ಲವಂತೆ. ರಂಗಭೂಮಿ ಕಲಾವಿದನೊಬ್ಬ ಉದ್ದ ಕೂದಲು ಬಿಟ್ಟಿದ್ದಕ್ಕೆ ಆತನನ್ನು ಬಂಧಿಸಿ ಬಿಟ್ಟಿದೆ ಅಲ್ಲಿನ ಸರ್ಕಾರ.

ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿರುವ ಅಬುಜರ್ ಮಧು(28) ವೃತ್ತಿಯಲ್ಲಿ ರಂಗಭೂಮಿ ಕಲಾವಿದ ಹಾಗೂ ಶಿಕ್ಷಕನಂತೆ. ಆತ ಉದ್ದ ಕೂದಲನ್ನು ಬಿಟ್ಟಿದ್ದಾನೆ. ಆದರೆ ಅದನ್ನು ಕಂಡರೆ ಪೊಲೀಸರು ಪ್ರಶ್ನೆ ಮಾಡುತ್ತಾರಂತೆ. ಪ್ರತಿನಿತ್ಯ ಒಬ್ಬ ಪೊಲೀಸ್ ಅಧಿಕಾರಿಯಾದರೂ ಅಬುಜರ್​ನನ್ನು ನಿಲ್ಲಿಸಿ ಕೂದಲೇಕೆ ಬಿಟ್ಟಿದ್ದೀಯ ಎಂದು ಪ್ರಶ್ನೆ ಮಾಡುತ್ತಾರಂತೆ. ಇತ್ತೀಚೆಗೆ ಒಂದು ದಿನ ಆತ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಹತ್ತಿರ ಬಂದ ಪೊಲೀಸರು ಕೂದಲು ಉದ್ದ ಬಿಟ್ಟಿದ್ದಾಕ್ಕಾಗಿಯೇ ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರಂತೆ.

ಕರಾಚಿಯ ಸಾಂಸ್ಕೃತಿಕ ನಿರೂಪಕ ಅಹ್ಮರ್ ನಖ್ವಿ ಅವರು ಹೇಳುವ ಪ್ರಕಾರ, 90ರ ದಶಕದಲ್ಲಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ದೇಶದಲ್ಲಿ ಪಾಪ್​ ಹಾಡುಗಳನ್ನು ನಿಷೇಧಿಸಿದ್ದರಂತೆ. ಅದರ ಜತೆ ಉದ್ದ ಕೂದಲು ಬಿಡುವುದನ್ನೂ ನಿಲ್ಲಿಸಬೇಕು ಎಂದಿದ್ದರಂತೆ. ಅಂದಿನಿಂದ ಉದ್ದ ಕೂದಲಿಗೆ ಒಂದು ರೀತಿಯ ನಿಷೇಧ ಅಲ್ಲಿದೆಯಂತೆ. ಹಾಗೆಯೇ ಈ ಹಿಂದೆ ತಾಲಿಬಾನ್ ಉಗ್ರರು ಉದ್ದ ಕೂದಲು ಬಿಡುತ್ತಿದ್ದರಂತೆ. ಹಾಗಾಗಿ ಅಲ್ಲಿ ಯಾರೇ ಉದ್ದ ಕೂದಲು ಬಿಟ್ಟರೂ ಅವರನ್ನು ಒಂದು ಅನುಮಾನ ರೀತಿಯಲ್ಲಿ ನೋಡಲಾಗುತ್ತದೆಯಂತೆ.

ಆದರೆ ಅಬುಜರ್​ ಮಧು ಪಾಕ್​ನ ಈ ನಿಯಮವನ್ನು ಖಂಡಿಸಿದ್ದಾನೆ. ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿರುವ ಜನರು ಕಾರಿನಲ್ಲಿ ಉದ್ದ ಕೂದಲು ಬಿಟ್ಟುಕೊಂಡೇ ಓಡಾಡುತ್ತಾರೆ. ಆದರೆ ಅವರಿಗೆ ಯಾರೂ ಪ್ರಶ್ನೆ ಮಾಡುವುದಿಲ್ಲ. ನನ್ನಂತೆ ಸಾರ್ವಜನಿಕ ಸಾರಿಗೆ ಬಳಸುವವರಿಗೆ ಮಾತ್ರ ಸಾವಿರ ಪ್ರಶ್ನೆ ಕೇಳುತ್ತಾರೆ. ನಾನು ಕೂದಲು ಕತ್ತರಿಸುವುದಿಲ್ಲ, ಬದಲಾಗಿ ಇನ್ನಷ್ಟು ಉದ್ದ ಬಿಟ್ಟು ಹೋರಾಟ ಮಾಡುತ್ತೇನೆ. ಒಂದು ವೇಳೆ ಮುಂದೊಂದು ದಿನ ಕೂದಲು ಕತ್ತರಿಸಿದರೂ ಅದು ಈ ಸರ್ಕಾರಕ್ಕೆ ಹೆದರಿ ಅಲ್ಲ ಬದಲಾಗಿ ನನ್ನ ಸ್ಟೈಲ್​ ಬದಲಾವಣೆ ಆಗಿರುತ್ತದೆ ಅಷ್ಟೇ ಎಂದು ಆತ ಹೇಳಿದ್ದಾನೆ. (ಏಜೆನ್ಸೀಸ್)