ನ್ಯೂಸ್

ಗೋಮಾಳ ವಿಚಾರಕ್ಕೆ ಗ್ರಾಪಂ ಸದಸ್ಯನನ್ನು ಹತ್ಯೆ ಮಾಡಿದ್ದ ಆರೋಪಿ ಸೆರೆ ಹಿಂದಿದೆ ರೋಚಕ ಸ್ಟೋರಿ

ಬೆಂಗಳೂರು: ಗೋಮಾಳ ವಿಚಾರಕ್ಕೆ ಮಾಚೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಗ್ಯಾಂಗ್​ನ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾಚೋಹಳ್ಳಿ ಕಾಲನಿ ನಿವಾಸಿ ಮೋಹನ್​ಕುಮಾರ್ (28) ಬಂಧಿತ. 2019ರ ಏ. 15ರಂದು ಎನ್.ವಿ. ಲಕ್ಷ್ಮೀನಾರಾಯಣ್ ಎಂಬುವರನ್ನು ಗೋಮಾಳ ವಿಚಾರಕ್ಕೆ ಹತ್ಯೆ ಮಾಡಿದ್ದರು. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ 10 ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಮೋಹನ್ ತಲೆಮರೆಸಿಕೊಂಡಿದ್ದ. ಗುರುವಾರ ನಾಗರಬಾವಿಯಲ್ಲಿ ಬಂಧಿಸಲಾಗಿದೆ. ತಾನು ಖಾಸಗಿ ವಾಹಿನಿಗಳ (ಜೆಟಿವಿ ಮತ್ತು ಟಿವಿ6) ವ್ಯವಸ್ಥಾಪಕ ನಿರ್ದೇಶಕ ಎಂಬುದಾಗಿ ಆರೋಪಿ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಮಾಳ ಭೂಮಿಗಾಗಿ ಕೊಲೆ: ಲಕ್ಷ್ಮೀನಾರಾಯಣ್ ಮಾಚೋಹಳ್ಳಿ ಗ್ರಾಪಂ ಸದಸ್ಯರಾಗಿದ್ದರು. ಇದೇ ಊರಿನಲ್ಲಿ ಸರ್ವೆ ನಂ. 78 ಮತ್ತು 88ರಲ್ಲಿದ್ದ ಗೋಮಾಳದಲ್ಲಿ ಹರೀಶ್, ರಮೇಶ್, ವೆಂಕಟೇಶ್, ಕುಮಾರ್, ಲಕ್ಷ್ಮೀನರಸಿಂಹಪ್ಪ, ಅಂಜಿನಪ್ಪ ಎಂಬುವರ ಕುಟುಂಬಸ್ಥರು ಹಾಗೂ ಮತ್ತಿತರರು ಮನೆ ಕಟ್ಟುತ್ತಿದ್ದರು. ಸರ್ಕಾರಿ ಭೂಮಿಯಲ್ಲಿ ಕಟ್ಟಿರುವ ಕಟ್ಟಡ ತೆರವುಗೊಳಿಸುವಂತೆ ತಹಸೀಲ್ದಾರ್ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮೀನಾರಾಯಣ್ ಹಾಗೂ ಇತರೆ ಸದಸ್ಯರು ತೆರವುಗೊಳಿಸಿದ್ದರು.

ಬೈಕ್​ನಲ್ಲಿ ಹೋಗುತ್ತಿದ್ದಾಗ ತಡೆದು ಹತ್ಯೆ

ಗೋಮಾಳ ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷ್ಮೀನಾರಾಯಣ್ ಮೇಲೆ ಗ್ಯಾಂಗ್ ದ್ವೇಷ ಇಟ್ಟುಕೊಂಡಿತ್ತು. ಲಕ್ಷ್ಮೀನಾರಾಯಣ್ 2019ರ ಏ 15ರಂದು ಮಾಚೋಹಳ್ಳಿ ಕಾಲನಿಯ ಕೆಬ್ಬೆಹಳ್ಳ ರಸ್ತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಹರೀಶ್, ಮೋಹನ್​ಕುಮಾರ್ ಹಾಗೂ 10-15 ಜನರು ಕಾರು ಹಾಗೂ ಬೈಕ್​ನಲ್ಲಿ ಹೋಗಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಲಕ್ಷ್ಮೀನಾರಾಯಣ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಕೃತ್ಯಕ್ಕೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿತ್ತು. ಮೋಹನ್ ತನ್ನಿಬ್ಬರು ಸಹಚರರ ಜತೆ ತಲೆಮರೆಸಿಕೊಂಡಿದ್ದ ಎಂದು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.