ನ್ಯೂಸ್

ಅಂತ್ಯಸಂಸ್ಕಾರ ಮಾಡಲು ಬಂದಿದ್ದವರ ಮೇಲೆ ಕುಸಿದ ಛಾವಣಿ! 18 ಮಂದಿ ದುರ್ಮರಣ

ಗಾಜಿಯಾಬಾದ್​: ಕೊನೆಯುಸಿರೆಳೆದಿದ್ದ ಸಂಬಂಧಿಯ ಅಂತ್ಯಸಂಸ್ಕಾರ ಮಾಡಲು ಬಂದಿದ್ದ ಸಂಬಂಧಿಕರು ದುರ್ಮರಣ ಹೊಂದಿರುವ ಘಟನೆ ದೆಹಲಿ ಸನಿಹದ ಗಾಜಿಯಾಬಾದ್​ನಲ್ಲಿ ನಡೆದಿದೆ. ಈಗಾಗಲೇ 18 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಗಾಜಿಯಾಬಾದ್​ನ ಮುರಾದ್​ನಗರದಲ್ಲಿ ಇಂತದ್ದೊಂದು ದುರ್ಘಟನೆ ನಡೆದಿದೆ. ಉಖಲಾರ್ಸಿ ಗ್ರಾಮದ ವ್ಯಕ್ತಿಯೊಬ್ಬ ಮೃತನಾಗಿದ್ದ. ಆತನ ಅಂತ್ಯಸಂಸ್ಕಾರ ನಡೆಸಲೆಂದು ಸಂಬಂಧಿಕರು ಭಾನುವಾರ ಬೆಳಗ್ಗೆ ಶವಾಗಾರಕ್ಕೆ ಬಂದಿದ್ದಾರೆ. ಅಂತ್ಯಕ್ರಿಯೆ ನಡೆಸುವ ವೇಳೆಯಲ್ಲಿ ಜೋರಾಗಿ ಮಳೆ ಸುರಿದಿದೆ. ಆ ಹಿನ್ನೆಲೆಯಲ್ಲಿ ಎಲ್ಲರೂ ಅಲ್ಲಿನ ಛಾವಣಿಯ ಒಳಗೆ ಸೇರಿಕೊಂಡಿದ್ದಾರೆ. ಈ ವೇಳೆ ಛಾವಣಿ ಕುಸಿದುಬಿದ್ದಿದೆ.

ಛಾವಣಿಯ ಅಡಿ ಕನಿಷ್ಠ 24 ಮಂದಿ ಇದ್ದರು ಎನ್ನಲಾಗಿದೆ. ಸ್ಥಳಕ್ಕೆ ಗಾಜಿಯಾಬಾದ್​ ಪೊಲೀಸರು ಮತ್ತು ಎನ್​ಡಿಆರ್​ಎಫ್​ನ ರಕ್ಷಣಾ ತಂಡ ಬಂದಿದ್ದು, ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಈವರೆಗೆ 18 ಮಂದಿಯ ಮೃತ ದೇಹವನ್ನು ಹೊರತೆಗೆಯಲಾಗಿದೆ. ಛಾವಣಿಯ ಅವಶೇಷಗಳ ಅಡಿ ಇನ್ನಷ್ಟು ಜನರಿದ್ದು ಅವರನ್ನು ಹೊರತೆಗೆಯಲು ಹರಸಾಹಸ ಮಾಡಲಾಗುತ್ತಿದೆ. ಗಾಯಾಳಯಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)