Congress: ಕಾಂಗ್ರೆಸ್ ಪಕ್ಷದಲ್ಲಿ ಆಗಾಗ ಸಿಎಂ ಬದಲಾವಣೆ ಬಗ್ಗೆ ಕೂಗು ಹೇಳುತ್ತಲೇ ಇದೆ. ಇದೀಗ ವಿಧಾನಸಭೆಯಲ್ಲಿಯೇ ಸಿಎಂ ಸಿದ್ದರಾಮಯ್ಯ ಕೂಡ ನಾನೇ ಪೂರ್ಣವಧಿಯ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಹೀಗಾಗಿ, ಪಕ್ಷದಲ್ಲಿ ಸಿಎಂ ರೇಸ್ ಬಗ್ಗೆ ಮುಂದಿನ ದಿನಗಳಲ್ಲಿ ಕೂತುಹಲ ಮೂಡಿಸಿದೆ. ಇದೀಗ ಇದೇ ವಿಚಾರವನ್ನು ಮುಂದಿಟ್ಟಕೊಂಡು ಬಿಜೆಪಿ ರಾಜ್ಯ ಸರ್ಕಾರ ಬಗ್ಗೆ ಟೀಕೆ ವ್ಯಕ್ತಪಡಿಸಿದೆ.
ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ಕರ್ನಾಟಕ, ''ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ರಾಜ್ಯ ಕಾಂಗ್ರೆಸ್ ಪಕ್ಷದೊಳಗೆ ಅಸ್ಥಿರತೆ ಮನೆ ಮಾಡಿದೆ. ಪವರ್ ಶೇರಿಂಗ್ ಎಂಬ ಜ್ವಾಲಾಮುಖಿ ಆಗಾಗ ಸಿಡಿಯುತ್ತಲೇ ಇದೆ. ಇದೀಗ ನಿರುದ್ಯೋಗಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಸಚಿವರನ್ನು ಕರೆಸಿ ಪವರ್ ಶೇರಿಂಗ್ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ'' ಎಂದಿದೆ.
ಬಾಣಂತಿಯರ ಸರಣಿ ಸಾವು, ಮೈಕ್ರೋಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮುಂತಾದ ರಾಜ್ಯದ ಜನತೆಯ ಸಂಕಷ್ಟದ ಸಮಯದಲ್ಲಿ ಸಂಬಂಧಪಟ್ಟ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡದೇ ಇದ್ದ ಸಚಿವರು ಈಗ ಅಧಿಕಾರ ಹಂಚಿಕೆಯ ಸೂತ್ರಕ್ಕಾಗಿ ಪದೇ ಪದೇ ದೆಹಲಿ ಪರೇಡ್ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.
ಕಾಂಗ್ರೆಸ್ ಪಕ್ಷದ ಪವರ್ ಶೇರಿಂಗ್ ಜಗಳಕ್ಕೆ ಸಿಲುಕಿ ಕರ್ನಾಟಕ ರಾಜ್ಯ ಬಡವಾಗಿದೆ. ಗ್ಯಾರಂಟಿಗಳು ಸ್ಥಗಿತಗೊಳ್ಳುವ ಹಾದಿಯಲ್ಲಿದೆ. ಸಾರಿಗೆ ಇಲಾಖೆ, ಇಂಧನ ಇಲಾಖೆ, ಹಣಕಾಸು ಇಲಾಖೆಗಳು ಸ್ಥಬ್ದವಾಗಿದೆ.
ರಾಜ್ಯದ ಜನರ ಮೇಲೆ ಲಕ್ಷಗಟ್ಟಲೇ ಸಾಲ ಹೊರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಪೂರ್ಣಾವಧಿ ಸಿಎಂ ಕನಸು ಕಾಣುತ್ತಿದ್ದರೆ, ಡಿಸಿಎಂ ಅವರು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಸರತ್ತು ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.