ಮಾ.18ರ ಸಭೆಯಲ್ಲಿ ನವಲಿ ಅಣೆಕಟ್ಟು ನಿರ್ಮಾಣದ ಬಗ್ಗೆ ಚರ್ಚೆ; DK ಶಿವಕುಮಾರ್​

dk - 2025-03-13T162058.960
Published on

ಇದೇ 18 ರಂದು ಕೇಂದ್ರ ಜಲಶಕ್ತಿ ಸಚಿವರು ಪೆನ್ನಾರ್ ನದಿ ವಿಚಾರವಾಗಿ ನಮ್ಮನ್ನು ಹಾಗೂ ತಮಿಳುನಾಡಿನವರನ್ನು ಚರ್ಚೆಗೆ ಕರೆದಿದ್ದಾರೆ. ಅಂದು ನವಲಿ ಅಣೆಕಟ್ಟು ನಿರ್ಮಾಣ ಹಾಗೂ ಪರ್ಯಾಯ ಪರಿಹಾರಗಳ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ಮಾಡಲಾಗುವುದು ಡಿಸಿಎಂ DK ಶಿವಕುಮಾರ್ ಹೇಳಿದರು.

ಈ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯರಾದ ಬಸನಗೌಡ ಬಾದರ್ಲಿ ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿದೆ ಆದ ಕಾರಣಕ್ಕೆ ನವಲಿ ಜಲಾಶಯ ನಿರ್ಮಾಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಗುರುವಾರ ಪ್ರಶ್ನೆ ಕೇಳಿದರು.

ಈ ವಿಚಾರವಾಗಿ ಮಾತನಾಡಿದ ಡಿಸಿಎಂ “ಈ ವಿಚಾರವಾಗಿ ಆಂದ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಮಾತನಾಡಿ, ಪತ್ರ ಕೂಡ ಬರೆದಿದ್ದೇನೆ. ರಾಜಸ್ಥಾನದ ಉದಯಪುರಲ್ಲಿ ನಡೆದ ಸಮಾವೇಶದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಲಸಂಪನ್ಮೂಲ ಸಚಿವರ ಜತೆ ಚರ್ಚೆ ಮಾಡಿದ್ದು, ಆಂಧ್ರ ಪ್ರದೇಶ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಈ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಚರ್ಚೆ ಮಾಡಲು ಸಮಯ ನೀಡಿ ಎಂದು ಕೇಳಿದ್ದೆ. ಎರಡು ರಾಜ್ಯಗಳ ಜತೆ ಚರ್ಚೆ ಮಾಡಿದ ನಂತರ ತುಂಗಭದ್ರಾ ಮಂಡಳಿ ಮುಂದೆ ಈ ಯೋಜನೆಗಳ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದೆ. ಆಂಧ್ರಪ್ರದೇಶ ಸಿಎಂ ಅವರು ಈ ವಿಚಾರವಾಗಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ” ಎಂದು ಹೇಳಿದರು.

ತುಂಗಾಭದ್ರ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣಕ್ಕೆ ಸುಮಾರು 25 ರಿಂದ 30 ಟಿಎಂಸಿ ನೀರು ನಮಗೆ ಸಿಗದೆ ವ್ಯರ್ಥವಾಗುತ್ತಿದೆ. ಸಮತೋಲಿತ ಅನೆಕಟ್ಟು ನಿರ್ಮಾಣಕ್ಕೆ ಸುಮಾರು 15 ಸಾವಿರ ಎಕರೆ ಭೂಮಿ ಬೇಕಾಗಿದೆ. ಈ ಬಗ್ಗೆ ಈಗಾಗಲೇ ತಾಂತ್ರಿಕ ವರದಿಗಳನ್ನು ತಯಾರಿಸಲಾಗಿದೆ. ಈ ಬಗ್ಗೆ ಡಿಪಿಆರ್ ಕೂಡ ತಯಾರಾಗಿದೆ. ಇದನ್ನು ತುಂಗಭದ್ರಾ ಬೋರ್ಡ್ ಹಾಗೂ ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಕಳಿಸಲಾಗಿದೆ ಎಂದರು.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಸಮಯಾವಕಾಶ ನೀಡಿದ ತಕ್ಷಣ ನಾನೇ ಖುದ್ದಾಗಿ ಹೋಗಿ ಮಾತನಾಡುವೆ. ಸಚಿವ ಬೋಸ್ ರಾಜು, ಆ ಭಾಗದ ಇತರೆ ಸಚಿವರು ಹಾಗೂ ಶಾಸಕರು ಈ ಕೆಲಸ ಆಗಲೇಬೇಕು ಎಂದು ಬೆನ್ನು ಹತ್ತಿದ್ದಾರೆ. ಈಗಾಗಲೇ ನಾನು, ಬೋಸರಾಜು ಹಾಗೂ ಸಚಿವ ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net