ನ್ಯೂಸ್

ಪ್ರೀತಿಗೆ ಹಿರಿಯರು ಒಪ್ಪುವುದಿಲ್ಲ ಎಂಬ ಭಯ: ಹುಡುಗನ ಮನೆಯಲ್ಲಿ ನಡೆಯಿತು ಘೋರ ದುರಂತ

ಸಿದ್ದಿಪೇಟ್​: ತಮ್ಮ ಪ್ರೀತಿಗೆ ಹಿರಿಯರು ಒಪ್ಪಿಗೆ ನೀಡುವುದಿಲ್ಲ ಎಂಬ ಭಯದಲ್ಲಿ ಪ್ರೇಮಿಗಳಿಬ್ಬರು ಸಾವಿನ ಹಾದಿ ಹಿಡಿದಿರುವ ಮನಕಲಕುವ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆ ದುಬ್ಬಾಕ ಮಂಡಲದ ಲಟ್ಚಾಪೇಟೆಯಲ್ಲಿ ನಡೆದಿದೆ.

ಮೃತ ಪ್ರೇಮಿಗಳನ್ನು ಕರುಪಾತಿ ಭಗೀರಥ (17) ಮತ್ತು ಥೋಟ್ಲಾ ನೇಹಾ (16) ಎಂದು ಗುರುತಿಸಲಾಗಿದೆ. ಇಬ್ಬರು ಲಟ್ಚಾಪೇಟೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಇಬ್ಬರು ದುಬ್ಬಾಕ ಮಂಡಲದ ಜೂನಿಯರ್​ ಕಾಲೇಜಿನ ಪಿಯು ವಿದ್ಯಾರ್ಥಿಯಾಗಿದ್ದರು. ಇಬ್ಬರು ತುಂಬಾ ಪ್ರೀತಿಸುತ್ತಿದ್ದರು.

ಆದರೆ, ತಮ್ಮ ಪ್ರೀತಿಗೆ ಹಿರಿಯರು ಒಪ್ಪಿಗೆ ನೀಡುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಇಬ್ಬರು ಬೇರೆಯಾಗುತ್ತೇವೆ ಎಂಬ ಭಯ ಇಬ್ಬರಲ್ಲೂ ಕಾಡುತ್ತಿತ್ತು. ಇದೇ ಭಯದಲ್ಲಿ ದುಡುಕಿನ ನಿರ್ಧಾರ ತೆಗೆದು ಪ್ರೇಮಿಗಳು ಸಾವಿನ ಮನೆ ಸೇರಿದ್ದಾರೆ.

ಮಂಗಳವಾರ ಸಂಜೆ ಭಗೀರಥನ ಪಾಲಕರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಇಬ್ಬರು ಭೇಟಿಯಾಗಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಇಬ್ಬರ ಸಾವಿನ ಕಾರಣ ತಿಳಿದ ಪಾಲಕರು ಮತ್ತು ಗ್ರಾಮಸ್ಥರು ಶಾಕ್​ಗೆ ಒಳಗಾಗಿದ್ದಲ್ಲದೆ, ಹದಿಹರೆಯದ ಪ್ರೇಮಿಗಳ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಮೃತದೇಹಗಳನ್ನು ದುಬ್ಬಾಕಾದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪಾಲಕರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)