ಸಾಣಂಬಟ್ಲ: ತನ್ನ ತಾಯಿಯ ಕೆಟ್ಟ ನಡವಳಿಕೆಯಿಂದ ನೊಂದ ಬಾಲಕಿಯು ಗ್ರಾಮದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಆಂಧ್ರದ ತಿರುಪತಿಯ ಸಾಣಂಬಟ್ಲಾ ಗ್ರಾಮದಲ್ಲಿ ನಡೆದಿದೆ. ಆರೋಪಿ ಬಾಲಕಿಯನ್ನು ಕೀರ್ತಿ(19) ಎಂದು ಗುರುತಿಸಲಾಗಿದೆ.
ಗ್ರಾಮದಿಂದ ತನ್ನ ಕುಟುಂಬವನ್ನು ಸ್ಥಳಾಂತರಿಸುವ ಉದ್ದೇಶದಿಂದ ಸುಮಾರು ಒಂದು ತಿಂಗಳಿನಿಂದ ಯಾರಿಗೂ ತಿಳಿಯದಂತೆ 12 ಸ್ಥಳಗಳಲ್ಲಿ ಬೆಂಕಿ ಹಚ್ಚಿರುವುದಾಗಿ ಹೇಳಿದ್ದಾಳೆ. ಈ ತರಹದ ಸರಣಿ ಬೆಂಕಿಗಳಿಂದ ತನ್ನ ಕುಟುಂಬವನ್ನು ಮೂಢನಂಬಿಕೆಗೆ ತಳ್ಳವುದರ ಜತೆಗೆ ತನ್ನ ತಾಯಿಯ ಕೆಟ್ಟ ನಡವಳಿಕೆಯನ್ನು ಸುಧಾರಿಸಲು ಗ್ರಾಮವನ್ನು ಖಾಲಿ ಮಾಡಬಹುದೆಂದು ಬಾಲಕಿ ಯೋಚಿಸಿದ್ದಳು.
ಹಾಗಾಗಿ ಊರಿನಲ್ಲಿನ ಬಣವೆಗಳು, ನೆರೆಹೊರೆಯವರು ಮನೆ ಹೊರಗಡೆ ಹಾಕಿದ್ದ ಬಟ್ಟೆ ಹಾಗೂ ಎಲ್ಲೆಂದರಲ್ಲಿ ಯಾರಿಗೂ ಗೊತ್ತಾಗದಂತೆ ಬೆಂಕಿ ಹಾಕಿ ಸುಡುತ್ತಿದ್ದಳು. ಇದರಿಂದ ಗ್ರಾಮದ ಜನರು ಭೀತಿಗೆ ಒಳಗಾಗಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)