ನ್ಯೂಸ್

ಲೋಕಸಭಾ ಚುನಾವಣೆ 2024; ಹಲವೆಡೆ ಮತಯಂತ್ರದಲ್ಲಿ ದೋಷ, ವೋಟಿಂಗ್​ ಸ್ಥಗಿತ

Webdesk - Manjunatha B

ಬೆಂಗಳೂರು: ದೇಶದಲ್ಲಿ 18ನೇ ಸಾರ್ವತ್ರಿಕ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು, ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 26) ನಡೆಯುತ್ತಿದೆ. ಎರಡನೇ ಹಂತದಲ್ಲಿ ಒಟ್ಟು 13 ರಾಜ್ಯಗಳ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಇದು ಮೊದಲ ಹಂತದ ಮತದಾನವಾಗಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ಮತದಾನ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಇನ್ನು ರಾಜ್ಯದ ಹಲವೆಡೆ ಮತಯಂತ್ರವು ಆರಂಭದಲ್ಲೇ ಕೈಕೊಟ್ಟಿದ್ದು, ಕೆಲಕಡೆ ವೋಟಿಂಗ್​ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಅದರಂತೆ ಮಂಡ್ಯ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಸೇರಿದಂತೆ ಅನೇಕ ಕಡೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಮತದಾನವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿದೆ. ಇತ್ತ ಆರಂಭದಲ್ಲೇ ಮತಯಂತ್ರಗಳು ಕೈಕೊಟ್ಟಿದ್ದನ್ನು ಕಂಡು ಸರತಿ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರು ಚುನಾವಣಾ ಆಯೋಗವನ್ನು ದೂಷಿಸಿಸುತ್ತಿರುವುದು ಕಂಡು ಬಂದಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಬೂತ್​ ಸಂಖ್ಯೆ 240, ಹಾಸನ ನಗರದ ಸಂತೇಪೇಟೆಯ ಶಾಲೆಯ ಮತಗಟ್ಟೆ ಸಂಖ್ಯೆ 189, ಚಿಕ್ಕಮಗಳೂರಿನ ಆರೆನೂರು ಗ್ರಾಮದ ಮತಗಟ್ಟೆ ಸಂಖ್ಯೆ 53, ಮಂಡ್ಯ ಜಿಲ್ಲೆಯ ಮಾಕವಳ್ಳಿಯ ಮತಗಟ್ಟೆ ಸಂಖ್ಯೆ 100ರ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೆಲವೆಡೆ ಅಧಿಕಾರಿಗಳು ಮತಯಂತ್ರವನ್ನು ತಕ್ಷಣವೇ ಸರಿಪಡಿಸಿದ್ದಾರೆ. ಇನ್ನು ಹಲವೆಡೆ ಯಂತ್ರ ಸ್ಥಗಿತಗೊಂಡು ತುಂಬಾ ಹೊತ್ತು ಕಳೆದರೂ ಮತಯಂತ್ರ ಸರಿಯಾಗಿಲ್ಲ ಎಂದು ಮತದಾರರು ಆರೋಪಿಸಿದ್ದಾರೆ.