ನ್ಯೂಸ್

ಕರೊನಾ ವಿರುದ್ಧದ ಹೋರಾಟದಲ್ಲಿ ಟೀಂ ಇಂಡಿಯ ದಾಖಲೆಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. ಅಮೆರಿಕದ ಮೂರು ದಿನಗಳ ಪ್ರವಾಸವನ್ನು ಮುಗಿಸಿ ಭಾರತಕ್ಕೆ ಹೊರಟ ಮೋದಿ, ತಮ್ಮ ಮನ್ ಕಿ ಬಾತ್​​ನ 81ನೇ ಆವೃತ್ತಿಯಲ್ಲಿ ಕೋವಿಡ್​ 19 ವಿರುದ್ಧದ ಹೋರಾಟದಲ್ಲಿ ಭಾರತ ಪ್ರತಿದಿನ ಹೊಸ ದಾಖಲೆ ಸೃಷ್ಟಿಸುತ್ತಿದೆ ಎಂದರು.

“ಕೋವಿಡ್​ 19 ವಿರುದ್ಧದ ಹೋರಾಟದಲ್ಲಿ, ವಿಶೇಷವಾಗಿ ಲಸಿಕೀಕರಣದ ವಿಚಾರದಲ್ಲಿ, ಟೀಂ ಇಂಡಿಯಾ ಪ್ರತಿದಿನ ಹೊಸ ದಾಖಲೆ ಸೃಷ್ಟಿಸುತ್ತಿದೆ... ಯಾರು ಇನ್ನೂ ಕರೊನಾ ಲಸಿಕೆ ಪಡೆದಿಲ್ಲವೋ ಅಂಥವರು ತಕ್ಷಣ ಲಸಿಕೆ ಪಡೆಯಬೇಕೆಂದು ನಾನು ವಿನಂತಿಸುತ್ತೇನೆ. ಲಸಿಕೆ ಪಡೆದ ಮೇಲೂ ನಿಮ್ಮ ಜಾಗರೂಕತೆಯನ್ನು ಮುಂದುವರೆಸಬೇಕು, ನೆನಪಿರಲಿ" ಎಂದು ಮೋದಿ ಹೇಳಿದರು.

ಇಂದು 'ವಿಶ್ವ ನದಿಗಳ ದಿನ'ವಾದ್ದರಿಂದ ಒಂದು ವಿಶೇಷ ದಿನ. ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ವಿಷಯವಾಗಿದೆ. ಈ ಸಂದರ್ಭದಲ್ಲಿ, ಜನರ ಪಾಲ್ಗೊಳ್ಳುವಿಕೆಯೊಂದಿಗೆ ಉತ್ತಮವಾಗಿ ನಡೆಯುತ್ತಿರುವ ನಮಾಮಿ ಗಂಗೇ ಮಿಷನ್​ ನೆನಪಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಸಿಯಾಚಿನ್ ಗ್ಲೇಸಿಯರ್​ನ ಚಾರಣ ನಡೆಸಿ ವಿಶ್ವ ದಾಖಲೆ ಸೃಷ್ಟಿಸಿದ ಎಂಟು ಜನ ವಿಶೇಷ ಚೇತನರ ತಂಡವನ್ನು ಮೋದಿ ಅಭಿನಂದಿಸಿದ ಮೋದಿ, ಡಿಜಿಟಲ್​ ಇಂಡಿಯಾ ಚಳುವಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಗಸ್ಟ್​ ತಿಂಗಳಲ್ಲಿ ₹350 ಕೋಟಿಗಳ ವ್ಯವಹಾರವು ಯುಪಿಐ ಮೂಖಾಂತರ ಡಿಜಿಟಲ್​ ಆಗಿ ನಡೆದಿದೆ ಎಂದು ತಿಳಿಸಿದರು. (ಏಜೆನ್ಸೀಸ್)