ನ್ಯೂಸ್

ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ; 9 ಮಂದಿ ಸಾವು!

ಚೆನ್ನೈ: ವಾರದ ಹಿಂದೆಯಷ್ಟೇ ತಮಿಳುನಾಡಿನಲ್ಲಿ ಸಂಭವಿಸಿದ್ದ ಪಟಾಕಿ ದುರಂತದಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಇದೀಗ ಆ ಪ್ರಕರಣದ ನೆನಪು ಜನರ ಮನಸಲ್ಲಿ ಹಸಿಯಾಗಿರುವಾಗಲೇ ತಮಿಳುನಾಡಿನಲ್ಲಿ ಇನ್ನೊಂದು ಪಟಾಕಿ ದುರಂತ ಸಂಭವಿಸಿದ್ದು, ಇದರಲ್ಲೂ 9 ಮಂದಿ ಸಾವಿಗೀಡಾಗಿದ್ದಾರೆ.

ತಮಿಳುನಾಡಿನ ವಿರುಧುನಗರ ಜಿಲ್ಲೆಯ ಕಮ್ಮಪಟ್ಟಿ ಗ್ರಾಮದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದ್ದು, ಕನಿಷ್ಠ 9 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ತುರ್ತು ಹಾಗೂ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ಆರಿಸುವ ಜತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಶಿವಕಾಸಿಯ ಈ ಪಟಾಕಿ ಕಾರ್ಖಾನೆಯಲ್ಲಿ ಇಂದು ಮಧ್ಯಾಹ್ನದ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಅಗ್ನಿ ಆಕಸ್ಮಿಕ ಸಂಭವಿಸಲು ಕಾರಣ ಏನು ಎಂಬ ಕುರಿತು ಖಚಿತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ವೆಟ್ರಿಯೂರು ಗ್ರಾಮದ ಬಳಿ ಇರುವ ವೀರಗಾಲೂರು ಸಮೀಪ ಅ. 9ರಂದು ಪಟಾಕಿ ದುರಂತ ಸಂಭವಿಸಿತ್ತು. ಈ ಅವಘಡದಲ್ಲಿ 9 ಮಂದಿ ಸಾವಿಗೀಡಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದರು.