ವಿಜಯವಾಡ: ವಿರೋಧ ಪಕ್ಷದ ನಾಯಕರನ್ನು ಸದಾ ಟೀಕಿಸುವ ಮೂಲಕ ಸುದ್ದಿಯಾಗುವ ನಟಿ, ರಾಜಕಾರಣಿ ರೋಜಾ ಸದ್ಯ ಆಂಧ್ರ ಪ್ರದೇಶದಲ್ಲಿ ನಡೆಯಲಿರುವ ಮುನ್ಸಿಪಾಲ್ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ನಗರಿ ಕ್ಷೇತ್ರದ ಶಾಸಕಿ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿಯ ಅಧ್ಯಕ್ಷೆಯು ಆಗಿರುವ ರೋಜಾ ಭಾನುವಾರ ತಮ್ಮ ನಗರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ನಾಯಕರು ಮತ್ತು ಪುತ್ತೂರ್ ಮುನ್ಸಿಪಾಲಿಟಿ ನಾಯಕರ ಜತೆ ಓಡಾಡಿ ತಮ್ಮ ಬೆಂಬಲಿಗರಿಗೆ ಮತ ಹಾಕುವಂತೆ ಮನವಿ ಮಾಡಿದರು.
ರೋಜಾ ಅವರ ಭೇಟಿ ವೇಳೆಯೇ ಚಿತ್ತೂರ್ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಟೂರ್ನಮೆಂಟ್ ಬಳಿ ಹೋದ ರೋಜಾ, ಆಟಗಾರರನ್ನು ಹುರಿದುಂಬಿಸಲು ಸೀರೆ ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಕಬಡ್ಡಿ ಕೋರ್ಟ್ಗೆ ಇಳಿದರು.
ಕಬಡ್ಡಿ... ಕಬಡ್ಡಿ ಎನ್ನುತ್ತಾ ಕೆಲಕಾಲ ಆಟಗಾರರ ಜತೆ ಆಡುವ ಮೂಲಕ ಅವರನ್ನು ಹುರಿದುಂಬಿಸಿದರು. ರೋಜಾ ಮತ್ತೊಮ್ಮೆ ಥಿರುವೆಲಾಂಗಾಡು ತಂಡದ ಜತೆ ಆಡಿದರು. (ಏಜೆನ್ಸೀಸ್)