ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯಿಂದ ಆಗಿದೆ ಎಂದು ಪೊಲೀಸರು ಈಗಾಗಲೇ ಖಚಿತಪಡಿಸಿದ್ದಾರೆ. ಆದರೆ, ಆತ್ಮಹತ್ಯೆಗೆ ಕಾರಣವೇನು ಹಾಗೂ ಸಾವಿಗೆ ಸಂಬಂಧಿಸಿದಂತೆ ದಾಖಲಾಗಿರುವ ಕೆಲ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುಶಾಂತ್ ಸಿಂಗ್ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಶ್ರುತಿ ಮೋದಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ನಟನ ಆರ್ಥಿಕ ವಹಿವಾಟುಗಳ ಬಗ್ಗೆ ವಿವರ ನೀಡಿದ್ದಾರೆ.
ಸುಶಾಂತ್ ಸಿಂಗ್ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರಲಿಲ್ಲ. ಅವರ ಹಣಕಾಸಿನ ಸ್ಥಿತಿ ಚೆನ್ನಾಗಿತ್ತು ಎಂದು ಶ್ರುತಿ ಹೇಳಿದ್ದಾರೆ. ಸುಶಾಂತ್ ತಿಂಗಳ ವೆಚ್ಚ 10 ಲಕ್ಷ ರೂ. ಗೂ ಹೆಚ್ಚಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಬಾಂದ್ರಾದಲ್ಲಿ ಸುಶಾಂತ್ ನೆಲೆಸಿದ್ದ ಮನೆಗೆ ತಿಂಗಳಿಗೆ ನಾಲ್ಕೂವರೆ ಲಕ್ಷ ರೂ. ಬಾಡಿಗೆ ಪಾವತಿಸಲಾಗುತ್ತಿತ್ತು. ಜತೆಗೆ, ಲೋನಾವಲದಲ್ಲಿ ಸುಶಾಂತ್ ಫಾರ್ಮ್ಹೌಸ್ ಬಾಡಿಗೆಗೆ ಪಡೆದಿದ್ದರು. ಇದಕ್ಕಾಗಿ ತಿಂಗಳಿಗೆ ಲಕ್ಷಾಂತರ ರೂ. ಪಾವತಿಸುತ್ತಿದ್ದರು ಎಂದಿದ್ದಾರೆ.
ಇದಲ್ಲದೇ ಸುಶಾಂತ್ಗೆ ವಿಲಾಸಿ, ಐಷಾರಾಮಿ ಕಾರು ಬೈಕ್ಗಳ ಕ್ರೇಜ್ ಇತ್ತು. ರೇಂಜ್ ರೋವರ್, ಮಸೆರೆಟ್ಟಿ, ಕ್ವಾಟ್ರೋಪೋರ್ಟ್ ಕಾರು ಹೊಂದಿದ್ದರು. ಜತೆಗೆ ಬಿಎಂಡಬ್ಲ್ಯು ಬೈಕ್ ಕೂಡ ಇತ್ತು.
ಇದನ್ನೂ ಓದಿ; ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್ ಸಿಂಗ್; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ; ನಿಗೂಢವಾಗುತ್ತಿದೆ ಆತ್ಮಹತ್ಯೆ ಕಾರಣ
ಜತೆಗೆ, ಸುಶಾಂತ್ ನಾಲ್ಕು ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದರು. ಸಿನಿಮಾಗಳ ಹೊರತಾಗಿ ವರ್ಚುವಲ್ ರಿಯಾಲಿಟಿಗೆ ಸಂಬಂಧಿಸಿದ ರೆಡ್ ರಿಯಲಿಸ್ಟಿಕ್ ಎಂಬ ಕಂಪನಿ ಆರಂಭಿಸಿದ್ದರು. ನಾಸಾ ಹಾಗೂ ಇಸ್ರೋ ಚಟುವಟಿಕೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ನೇಷನ್ ಇಂಡಿಯಾ ಫಾರ್ ವರ್ಲ್ಡ್ ಎಂಬ ಸಂಸ್ಥೆ ನಡೆಸುತ್ತಿದ್ದರು. ಇದಲ್ಲದೇ ಜಿನಿಯಸ್ ಆ್ಯಂಡ್ ಡ್ರಾಪ್ಔಟ್ ಎಂಬ ಸಾಮಾಜಿಕ ಸೇವಾ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಶ್ರುತಿ ಮಾಹಿತಿ ನೀಡಿದ್ದಾರೆ.
ಖಗೋಳದ ಬಗ್ಗೆ ಅತೀವ ಉತ್ಸಾಹ ಹೊಂದಿದ್ದ ಸುಶಾಂತ್ ಮನೆಯಲ್ಲಿ ವಿಶೇಷ ಟೆಲಿಸ್ಕೋಪ್ ಇತ್ತು ಶ್ರುತಿ ಮೋದಿ ಪೊಲೀಸರಿಗೆ ವಿವರಿಸಿದ್ದಾರೆ.