Max Movie: ಕನ್ನಡ ಚಿತ್ರರಂಗದ ಬಾದ್ಷಾ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ 'ಮ್ಯಾಕ್ಸ್' ಸಿನಿಮಾ ರಿಲೀಸ್ಗೆ ಇದೀಗ ದಿನಗಣನೆ ಆರಂಭಗೊಂಡಿದೆ. ‘ವಿಕ್ರಾಂತ್ ರೋಣ’ ಬಿಡುಗಡೆಯಾಗಿ ಎರಡೂವರೆ ವರ್ಷಗಳ ಬಳಿಕ ಸುದೀಪ್ ನಾಯಕರಾಗಿ ಕಾಣಿಸಿಕೊಂಡಿರುವ ‘ಮ್ಯಾಕ್ಸ್’ ಬಿಡುಗಡೆಗೆ ಸದ್ಯ ಕಾತರ ಹೆಚ್ಚಿದೆ.
ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಮಾಸ್ ಆಗಿ ಕಾಣಿಸಿಕೊಂಡಿರುವುದು ಈಗಾಗಲೇ ಟೀಸರ್ ಮೂಲಕ ಸ್ಪಷ್ಟವಾಗಿದೆ. ಸಖತ್ ರಗಡ್ ಆಗಿ ತೆರೆ ಮೇಲೆ ಬಂದಿರುವ ಸುದೀಪ್, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದೇ ವಿಶೇಷ. ತೆರೆ ಮೇಲೆ ಕಿಚ್ಚನಿಗೆ 'ಮಾಣಿಕ್ಯ'ದಲ್ಲಿ ಜತೆಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮಿಂಚಿದರೆ, ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಬಿಗ್ಬಾಸ್ ಸ್ಪರ್ಧಿ ಉಗ್ರಂ ಮಂಜು ಮಿಂಚಿರುವುದು ಟೀಸರ್ನಲ್ಲಿ ಕಂಡುಬಂದಿದೆ.
ಸದ್ಯ ಕಿಚ್ಚನ ಅಭಿಮಾನಿಗಳಲ್ಲಿ ‘ಮ್ಯಾಕ್ಸ್’ ಕಿಚ್ಚು ಹೆಚ್ಚಾಗಿದ್ದು, ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯತೊಡಗಿದ್ದಾರೆ. ಇದೇ ಡಿ.25ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಗೆ ಅಪ್ಪಳಿಸಲಿರುವ ಸಿನಿಮಾದ ಟ್ರೇಲರ್ ನಾಳೆ (ಡಿ.22) ಬೆಳಗ್ಗೆ 11.08ಕ್ಕೆ ಯುಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್‌ಕುಮಾರ್, ಸುಕೃತಾ ವಾಗ್ಲೆ, ಸಂಯುಕ್ತ ಹೊರನಾಡು ಸೇರಿದಂತೆ ಮುಂತಾದವರ ತಾರಾಗಣವಿದೆ.