ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ದಿಡೀರನೇ ದೆಹಲಿಗೆ ಹೊರಟಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸಂಜೆ ನೀಡಿರುವ ಆಹ್ವಾನದ ಮೇರೆಗೆ ಯಡಿಯೂರಪ್ಪ ಅವರು ಭಾನುವಾರ ಬೆಳಗ್ಗೆ 8.20ಕ್ಕೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದು, ಯಾವ ಕಾರಣಕ್ಕಾಗಿ ಈ ಬುಲಾವ್ ಬಂದಿದೆ ಎಂಬುದರ ಕುರಿತು ಎಲ್ಲರಲ್ಲಿ ಕುತೂಹಲ ಗರಿಗೆದರಿದೆ.
ಅಮಿತ್ ಶಾ ಅವರು ಜ. 16 ಮತ್ತು 17ರಂದು ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದು, ಅದಕ್ಕೂ ಮುನ್ನ ಯಡಿಯೂರಪ್ಪ ಕೈಗೊಳ್ಳುತ್ತಿರುವ ಈ ದೆಹಲಿ ಯಾತ್ರೆಗೆ ಅತ್ಯಂತ ಮಹತ್ವ ಬಂದಿದೆ. ಕಳೆದ ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟದ ವಿಸ್ತರಣೆ ಕುರಿತು ಮಾತುಕತೆ ನಡೆಸುವುದಕ್ಕಾಗಿ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆದಿರಬಹುದು ಎಂದು ಹೇಳಲಾಗುತ್ತಿದೆ. ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರಗಳಲ್ಲಿ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಕೂಡ ಇಬ್ಬರೂ ನಾಯಕರು ಚರ್ಚೆ ನಡೆಸಬಹುದು ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆಗೆ ಅಥವಾ ಪುನಾರಚನೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಕೆಲವು ತಿಂಗಳುಗಳ ಹಿಂದೆಯೂ ದೆಹಲಿಗೆ ತೆರಳಿದ್ದರು. ತಮ್ಮ ನಿಲುವನ್ನು ಹೈಕಮಾಂಡ್‌ಗೆ ಅರುಹಿದ್ದರು. ಆದರೆ ವಿಸ್ತರಣೆಗಾಗಲಿ, ಪುನರ್‌ರಚನೆಗಾಗಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಲಿಲ್ಲ. ಹಾಗಾಗಿ ಈ ವಿಷಯ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿತ್ತು. ಒಂದು ವೇಳೆ ನಾಳೆಯ ಭೇಟಿಯ ಸಂದರ್ಭದಲ್ಲಿ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಒಪ್ಪಿಗೆ ಸೂಚಿಸಿದರೆ, ಸಂಕ್ರಾಂತಿಯ ವೇಳೆಗೆ ಈ ಕೆಲಸ ನಿರಾತಂಕವಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.