ನ್ಯೂಸ್

ಬಾಹ್ಯಾಕಾಶದಲ್ಲಿ ಸ್ಟಾರ್​ಲೈನರ್ ನೌಕೆಯಲ್ಲಿ ಕೇಳಿಬಂತು ನಿಗೂಢ ಶಬ್ದ​: ಸುನಿತಾ ವಿಲಿಯಮ್ಸ್ ಜೀವಕ್ಕೆ ಅಪಾಯ?​!

ನವದೆಹಲಿ: ಬೋಯಿಂಗ್​ ಸ್ಟಾರ್​ಲೈನರ್ ಸ್ಪೇಸ್​ ಕ್ಯಾಪ್ಸುಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಕಾರಣ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್​ಎಸ್​)ದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್​ ವಿಲ್ಮೋರ್ ಭೂಮಿಗೆ ಆಗಮಿಸುವುದು ವಿಳಂಬವಾಗಲಿದೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇದೀಗ ಬಾಹ್ಯಾಕಾಶ ನಿಲ್ದಾಣದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿರುವುದಾಗಿ ವರದಿಯಾಗಿದೆ.

ಬೋಯಿಂಗ್​ ಸ್ಟಾರ್​ಲೈನರ್ ಸ್ಪೇಸ್​ ಕ್ಯಾಪ್ಸುಲ್​ನಿಂದ ಸೋನಾರ್​ ರೀತಿಯ ವಿಚಿತ್ರ ಹಾಗೂ ನಿಗೂಢ ಶಬ್ದ ಕೇಳುತ್ತಿದೆ ಎಂದು ಗಗನಯಾತ್ರಿ ಬಚ್​ ವಿಲ್ಮೋರ್​ ತಿಳಿಸಿರುವುದಾಗಿ ನಾಸಾ ವರದಿ ಮಾಡಿದೆ.

ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಬೋಯಿಂಗ್​ ಸ್ಟಾರ್​ಲೈನರ್ ನೌಕೆಯನ್ನು ಯಾವುದೇ ಸಿಬ್ಬಂದಿ ಇಲ್ಲದೆ ವಾಪಸ್​ ಭೂಮಿಗೆ ಕರೆಸಿಕೊಳ್ಳಲು ಅನ್​ಡಾಕ್ ಶೆಡ್ಯೂಲ್​ ಮಾಡಿದ ದಿನದ ಬೆನ್ನಲ್ಲೇ​ ಈ ವಿಚಿತ್ರ ಘಟನೆ ನಡೆದಿದೆ. ತಾಂತ್ರಿಕ ದೋಷ ಕಾರಣ ವಿಲ್ಮೋರ್​ ಮತ್ತು ಸುನಿತಾ ವಿಲಿಯಮ್ಸ್​ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಭೂಮಿಗೆ ಮರಳಬೇಕಿತ್ತು. ಆದರೆ, ಬೋಯಿಂಗ್​ ಸ್ಟಾರ್​ಲೈನರ್ ಕೈಕೊಟ್ಟ ಹಿನ್ನೆಲೆ ಇಬ್ಬರು ಗಗನಯಾತ್ರಿಗಳು ಭೂಮಿಗೆ ಬರುವುದು ವಿಳಂಬವಾಗಲಿದೆ. ಇತ್ತೀಚೆಗೆ ಅಮೆರಿಕದ ಹೌಸ್ಟನ್​ನಲ್ಲಿರುವ ನಾಸಾದ ಮಿಷನ್​ ಕಂಟ್ರೋಲ್​ ಸಂಪರ್ಕಿಸಿ, ವಿಚಿತ್ರ ಶಬ್ದ ಕೇಳಿಬರುತ್ತಿರುವುದಾಗಿ ವಿಲ್ಮೋರ್​ ವರದಿ ಮಾಡಿದ್ದಾರೆ.​

ನಾಸಾ ಜತೆಗಿನ ಧ್ವನಿಮುದ್ರಿತ ಸಂಭಾಷಣೆಯಲ್ಲಿ ವಿಲ್ಮೋರ್ ಅವರು ಆ ವಿಚಿತ್ರ ಶಬ್ದವನ್ನು ಪುನರಾವರ್ತಿತ, ಜಲಾಂತರ್ಗಾಮಿ ಸೋನಾರ್ ಅನ್ನು ನೆನಪಿಸುವ ಅಥವಾ ಬಾಹ್ಯಾಕಾಶ ನೌಕೆಯ ಹೊರಗಿನಿಂದ ಟ್ಯಾಪಿಂಗ್ ಮಾಡಿದಂತಹ ಧ್ವನಿ ಎಂದು ವಿವರಿಸಿದ್ದಾರೆ. ಸ್ಟಾರ್‌ಲೈನರ್‌ ನೌಕೆಯ ಆಂತರಿಕ ಸ್ಪೀಕರ್‌ಗೆ ಮೈಕ್ರೊಫೋನ್ ಅನ್ನು ಹಿಡಿದಾಗ ಈ ವಿಲಕ್ಷಣವಾದ ಶಬ್ದ ಕೇಳಿದೆ. ನಾಸಾದ ಮಿಷನ್ ಕಂಟ್ರೋಲ್ ಈ ಧ್ವನಿಯನ್ನು ದೃಢಪಡಿಸಿದ್ದು, ಒಂದು ರೀತಿಯ ಸೋನಾರ್ ಶಬ್ದ ಎಂದು ಹೇಳಿದೆ. ಈ ಘಟನೆಯಿಂದ ಆತಂಕ ಇನ್ನು ಹೆಚ್ಚಾಗಿದೆ. ಇಬ್ಬರು ಗಗನಯಾತ್ರಿಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಈಗಾಗಲೇ ಇಬ್ಬರು ಬಾಹ್ಯಾಕಾಶದಲ್ಲಿ ಸಿಲುಕಿ ಮೂರು ತಿಂಗಳು ಕಳೆದಿವೆ. ಇದರಿಂದ ಅವರ ಆರೋಗ್ಯದ ಕಾಳಜಿಯೂ ಪ್ರಶ್ನೆಯಾಗಿದೆ.

ಬೋಯಿಂಗ್​ ಸ್ಟಾರ್​ಲೈನರ್​ಗೆ ಏನಾಯಿತು? ಥಸ್ಟರ್​ ವಿಫಲ ಮತ್ತು ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳನ್ನು ಒಳಗೊಂಡಂತೆ ಸದ್ಯಕ್ಕೆ ಬೋಯಿಂಗ್​ ಸ್ಟಾರ್​ಲೈನರ್​ ಕ್ಯಾಪ್ಸುಲ್​ನಲ್ಲಿ ಕಾಣಿಸಿಕೊಂಡಿರುವ ತೊಂದರೆಗಳನ್ನು ನಿವಾರಿಸಲು ಬೋಯಿಂಗ್​ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಇತ್ತೀಚಿಗೆ ಬಂದ ಪರೀಕ್ಷೆಯ ಡೇಟಾ ಪ್ರಕಾರ ಕ್ಯಾಪ್ಸುಲ್​ನಲ್ಲಿನ ಥ್ರಸ್ಟರ್‌ಗಳ ಮಿತಿಮೀರಿದ ಶಾಖವು ಟೆಫ್ಲಾನ್ ಸೀಲ್‌ಗಳ ತಿರುಚಿಗೆ ಕಾರಣವಾಗಿದೆ ಮತ್ತು ಪ್ರೊಪೆಲ್ಲಂಟ್ ಹರಿವನ್ನು ನಿರ್ಬಂಧಿಸಿದ್ದು, ಒತ್ತಡವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಸಿಬ್ಬಂದಿ ಕರೆತರಲು ಸ್ಟಾರ್‌ಲೈನರ್ ಕ್ಯಾಪ್ಸುಲ್​ಸುರಕ್ಷಿತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಬೋಯಿಂಗ್ ಕ್ಯಾಪ್ಸುಲ್​ ಅನ್ನು ಸಿಬ್ಬಂದಿಯಿಲ್ಲದೆ ವಾಪಸ್​ ಭೂಮಿ ಕರೆತರಲು ನಾಸಾ ಮುಂದಾಗಿದೆ.

ಇನ್ನು ಈ ಘಟನೆ ಬೋಯಿಂಗ್​ಗೆ ಹಿನ್ನಡೆಯಾಗಿದೆ. ನಿರ್ವಹಣೆಯ ಸಮಸ್ಯೆಗಳು ಮತ್ತು ಇಂಜಿನಿಯರಿಂಗ್ ಸಮಸ್ಯೆಗಳನ್ನು ಒಳಗೊಂಡಂತೆ ಸ್ಟಾರ್ಲೈನರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ಟಾರ್‌ಲೈನರ್‌ ಕ್ಯಾಪ್ಸುಲ್​ ಅಭಿವೃದ್ಧಿ ಪಡಿಸಲು ಪ್ರಸ್ತುತ ಪರೀಕ್ಷಾ ಕಾರ್ಯಾಚರಣೆಗಾಗಿ 125 ಮಿಲಿಯನ್ ಡಾಲರ್​ ಸೇರಿದಂತೆ ಬೋಯಿಂಗ್‌ಗೆ 2016 ರಿಂದ 1.6 ಶತಕೋಟಿ ಡಾಲರ್​ ವೆಚ್ಚವಾಗಿದೆ.

ಇನ್ನು ವಿಲ್ಮೋರ್ ಮತ್ತು ವಿಲಿಯಮ್ಸ್‌ಗಾಗಿ ಮುಂಬರುವ ಕ್ರೂ ಡ್ರ್ಯಾಗನ್ ಉಡಾವಣೆಯಲ್ಲಿ ಎರಡು ಸ್ಥಾನಗಳನ್ನು ಖಾಲಿ ಬಿಡಲು ನಾಸಾ ಸ್ಪೇಸ್‌ಎಕ್ಸ್‌ನೊಂದಿಗೆ ಚರ್ಚಿಸಿದೆ. 2025ರ ಆರಂಭದಲ್ಲಿ ಗಗನಯಾತ್ರಿಗಳನ್ನು ಭೂಮಿಗೆ ಮರಳಿ ತರಲು 2024ರ ಸೆಪ್ಟೆಂಬರ್​ನಲ್ಲಿ ಉಡಾವಣೆ ಮಾಡಲು ನಿಗದಿಪಡಿಸಲಾದ ಸ್ಪೇಸ್​ಎಕ್ಸ್​ನ ಕ್ರ್ಯೂ-9 ಮಿಷನ್ ಅನ್ನು ಬಳಸುವುದನ್ನು ಈ ಯೋಜನೆ ಒಳಗೊಂಡಿದೆ. (ಏಜೆನ್ಸೀಸ್)