ನ್ಯೂಸ್

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ!; ಕೋಚ್​ನ ಗಾಜು ಪುಡಿ ಮಾಡಿದ ಕಿಡಿಗೇಡಿಗಳು

ಉತ್ತರಪ್ರದೇಶ: ವಂದೇ ಭಾರತ್ ರೈಲಿಗೆ ಕಲ್ಲು ತೂರಿದ ಕಿಡಿಗೇಡಿಗಳು, ಕೋಚ್‌ನ ಗಾಜನ್ನು ಪುಡಿ ಮಾಡಿದ ಘಟನೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಇಂದು ವರದಿಯಾಗಿದೆ.

ಬಾರಾಬಂಕಿಯ ಸಫೇದಾಬಾದ್ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು, ರೈಲು ಗೋರಖ್‌ಪುರದಿಂದ ಲಖನೌಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ರೈಲ್ವೇ ನಿಲ್ದಾಣಗಳ ವರ್ಚುವಲ್ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಈ ಕೃತ್ಯ ನಡೆದಿದೆ. ಬಾರಾಬಂಕಿಯ ರೈಲ್ವೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆಯ ಬಗ್ಗೆ ರೈಲ್ವೆ ರಕ್ಷಣಾ ಪಡೆ (RPF) ಬೆಂಗಾವಲು ತಂಡ ನಿಯಂತ್ರಣ ಕೊಠಡಿಗೆ ಮಾಹಿತಿ ಕೊಟ್ಟಿದೆ.

ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ಆಗಮಿಸಿದ ಆರ್‌ಎಫ್‌ಪಿ ಅಧಿಕಾರಿಗಳಿಗೆ ಸ್ಥಳದಲ್ಲಿ ಯಾವುದೇ ಅಶಿಸ್ತಿನ ಅಂಶಗಳು ಅಥವಾ ಸಾಕ್ಷಿಗಳು ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದೆ. ಸರ್ಕಾರಿ ಆಸ್ತಿಗೆ ಹಾನಿ ಉಂಟು ಮಾಡಿದ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವ ಮೂಲಕ ಪ್ರಯಾಣಿಕರ ಜೀವಕ್ಕೆ ಅಪಾಯ ತಂದಿರುವ ಬಗ್ಗೆ ಸಂಬಂಧಪಟ್ಟ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ,(ಏಜೆನ್ಸೀಸ್).