ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್​ 
ನ್ಯೂಸ್

ನೀವಿದ್ದಲ್ಲೇ ಇರಿ, ಅಲ್ಲೇ ನಿಮ್ಮನ್ನು ಮಣಿಸುತ್ತೇನೆ: ಪ್ರದೀಪ್ ಈಶ್ವರ್​​ಗೆ ಡಾ.ಕೆ.ಸುಧಾಕರ್ ಸವಾಲು

ಚಿಕ್ಕಬಳ್ಳಾಪುರ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ತೆರೆಮರೆಯ ಕಸರತ್ತು ಸೇರಿ ಭಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಇಂದು ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಕುರಿತಂತೆ ಮಾತನಾಡಿದ ಡಾ.ಕೆ.ಸುಧಾಕರ್, ಪ್ರದೀಪ್ ಈಶ್ವರ್ ತಾನು ಲಾಟರಿ ಎಂಎಲ್ಎ ಅಂತ ಹೇಳಿಕೊಂಡಿದ್ದಾರೆ. ಲಾಟರಿ ಮೂಲಕ ಆಗಿದ್ರೂ ಕೂಡ ಯಾರೂ ಹಾಗೆ ಹೇಳಿಕೊಳ್ಳಲ್ಲ. ವಿಶ್ವದಲ್ಲೇ ಆ ರೀತಿ ಹೇಳಿಕೊಳ್ಳುವ ಶಾಸಕ ಇವರೊಬ್ಬರೇ. ಶಾಸಕ ಪ್ರದೀಪ್ ಈಶ್ವರ್​​ಗೆ ಅರಿವಿನ ಕೊರತೆ ಇದೆ ಎಂದರು.

ನಾವು ಮಾತನಾಡಿದರೆ ರಾಜ್ಯ ಸರ್ಕಾರ ಎಸ್​ಐಟಿ ನ್ಯಾಯಾಂಗ ತನಿಖೆ ಅಂತ ಹೆದರಿಸುವ ಪ್ರಯತ್ನ ಮಾಡುತತಿದೆ. ಹಾಗೆ ಮಾಡುವುದಾದರೆ ನಮ್ಮದು ಕೇಂದ್ರ ಸರ್ಕಾರ ಇದೆ, ಇವರದ್ದು ಬರೀ ರಾಜ್ಯ ಸರ್ಕಾರ. 2013ರಿಂದ 2018ರ ವರೆಗಿನ ಭ್ರಷ್ಟಾಚಾರದ ಬಗ್ಗೆ ನನಗೆ ಗೊತ್ತಿಲ್ವಾ? ಅವರು ನನ್ನನ್ನು ಮುಟ್ಟಲಿ, ಆಮೇಲೆ ನಾನು ಮಾತಾಡುತ್ತೇನೆ ಎಂದು ಸುಧಾಕರ್ ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದರು.

ಸುಧಾಕರ್ ಕಾಂಗ್ರೆಸ್​ನಿಂದ ಎಂಪಿ ಟಿಕೆಟ್ ಕೇಳಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ ಎಂಬ ವಿಚಾರಕ್ಕೆ ಪತ್ರಿಕ್ರಿಯಿಸಿದ ಸುಧಾಕರ್, ಪ್ರದೀಪ್ ಈಶ್ವರ್ ಕನಸಲ್ಲೂ ನಾನು ಬರುತ್ತಿರುತ್ತೇನೆ. ನಾನು ಕಾಂಗ್ರೆಸ್​ಗೆ ಬಂದರೆ ಅವರಿಗೆ ಎಲ್ಲಿ ತೊಂದರೆ ಅಭದ್ರತೆ ಆಗುತ್ತದೆ ಅಂತ ಭಯಪಡುತ್ತಿದ್ದಾರೆ. ಅವರಿಗೆ ಭಯ ಬೇಡ ಎಂದರು. ಮಾತ್ರವಲ್ಲ, ನೀವು ಎಲ್ಲಿದ್ದೀರೋ ಅಲ್ಲೇ ಇರಿ, ಅಲ್ಲೇ ನಿಮ್ಮನ್ನು ಮಣಿಸುವ ಕೆಲಸ‌ ಮಾಡುತ್ತೇನೆ ಎಂದು ಪ್ರದೀಪ್​ ಈಶ್ವರ್​ಗೆ ಮಾಧ್ಯಮಗಳ ಮೂಲಕ ಸಂದೇಶ ರವಾನಿಸಿದರು.

ಅಲ್ಲದೆ ಲೋಕಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ನಾನು ಪಕ್ಷದ ಆದೇಶದ ಅನ್ವಯ ಕೆಲಸ ಮಾಡುತ್ತೇನೆ‌. ಪಕ್ಷ ಹೇಳಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ನಾನಾಗಿ ಪಕ್ಷದ ನಾಯಕರ ಬಳಿ ಕೇಳುವ ಪ್ರಶ್ನೆ ಇಲ್ಲ, ಪಕ್ಷ ಸಂಘಟನೆ ಮಾಡುವುದು ನನ್ನ ಉದ್ದೇಶ ಎಂದರು.