ಕೆಪಿಎಸ್ಸಿ ಹಗರಣ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೆಪಿಎಸ್ಸಿ (KPSC Scam) ಹಗರಣದ ಕಿಚ್ಚು ಜೋರಾಗಿಯೇ ಹೊತ್ತಿಕೊಂಡಿದೆ. ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಸರ್ಕಾರದ ವಿರುದ್ಧದ ಹೋರಾಟವಲ್ಲ, ಬದಲಿಗೆ ಆ ಪಕ್ಷದೊಳಗಿನ ಆಂತರಿಕ ಕಚ್ಚಾಟ ಹಾಗೂ ಬಿಕ್ಕಟ್ಟನ್ನು ಮುಚ್ಚಿಕೊಳ್ಳುವ ಕಸರತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ಆರೋಪಗಳಿಗೆ ಧಮ್ಮಿಲ್ಲ ಎಂದು ಗುಡುಗಿದ್ದು, ಕೆಪಿಎಸ್ಸಿ ಅಕ್ರಮಗಳ ಹಿಂದಿರುವುದು ಯಾರು, ಇದರ ಪಿತಾಮಹರು ಎನ್.ಡಿ.ಎ ನಾಯಕರು ಎಂಬುದಕ್ಕೆ ಸಾಕ್ಷಿಗಳು ಸಿಗುತ್ತಿವೆ. ಈ ಹಗರಣದಲ್ಲಿ ಬಿಜೆಪಿ ಹಾಗೂ ಎನ್.ಡಿ.ಎ ಮುಖಂಡರ ಸಂಪರ್ಕದ ಬಗ್ಗೆಯೂ ಗೃಹ ಸಚಿವರಿಗೆ ಅಗತ್ಯ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ಸುಮ್ಮನೆ ಕೂರುವ ಜಾಯಮಾನ ನಮ್ಮದಲ್ಲ!
ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿರುವ ಡಿಕೆಶಿ, ವಿರೋಧ ಪಕ್ಷಗಳು ತಮ್ಮ ರಾಜಕಾರಣ ಮಾಡಲಿ, ನಾವು ನಮ್ಮ ಜವಾಬ್ದಾರಿ ನಿರ್ವಹಿಸುತ್ತೇವೆ. ಸುಮ್ಮನೆ ಕೈಕಟ್ಟಿ ಕೂರುವ ಜಾಯಮಾನ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಅವರಿಗೆ ಇದುವರೆಗೆ ನೀಡಬೇಕಾದ ರಾಜಕೀಯ ಮರ್ಯಾದೆಯನ್ನು ನೀಡುತ್ತಲೇ ಬಂದಿದ್ದೇವೆ. ಆದರೆ, ಅವರು ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿಲ್ಲ. ಹಾಗಾಗಿ ಅವರ ರಾಜಕಾರಣ ಅವರು ಮಾಡಲಿ, ನಮ್ಮ ದಾರಿಯಲ್ಲಿ ನಾವು ಹೋಗುತ್ತೇವೆ ಎಂದು ಹೇಳಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದೇ ಬಿಜೆಪಿ ಸರ್ಕಾರದ ಕಾಲದಲ್ಲಿ. ಆ ಸಂದರ್ಭದಲ್ಲಿ ಅವರೊಂದಿಗೆ ನಂಟು ಹೊಂದಿದ್ದವರು ಯಾರೆಂಬುದರ ಬಗ್ಗೆಯೂ ಕೂಲಂಕುಶ ಪರಿಶೀಲನೆ ಆಗಬೇಕು. ಹಗರಣದ ಕಿಚ್ಚು ಜೆಡಿಎಸ್ ಹಾಗೂ ಬಿಜೆಪಿ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರನ್ನೂ ಸುತ್ತಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯಪಾಲರಿಂದ ಬಂದಿರುವ ವರದಿ ಹಾಗೂ ತನಿಖಾ ವಿಚಾರಗಳ ಕುರಿತು ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ ನೀಡಲಾಗಿದೆ. ಕಾನೂನು ಪ್ರಕಾರ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಡವರು, ರೈತರು ಹಾಗೂ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆ. ಅಭಿವೃದ್ಧಿ ಕೆಲಸಗಳನ್ನು ಬದಿಗಿಟ್ಟು ವಿಪಕ್ಷಗಳ ನಕಾರಾತ್ಮಕ ರಾಜಕಾರಣಕ್ಕೆ ಸಮಯ ವ್ಯರ್ಥ ಮಾಡಲು ನಾವು ಸಿದ್ಧರಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಸರ್ಕಾರದ ವಿರುದ್ಧ ಹೆಚ್ಡಿಕೆ ಕಿಡಿ!
ಕೆಪಿಎಸ್ಸಿ ಯನ್ನು ಒಳ್ಳೆಯ ಉದ್ದೇಶದಿಂದಲೇ ರಚನೆ ಮಾಡಲಾಗಿದೆ. ಆದರೆ ಈಗ ಅದರಲ್ಲಿ ಅಕ್ರಮ ತಾಂಡವ ಆಡುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
2011 ರ ಸಮಯದಲ್ಲಿ ಕೂಡ ನೇಮಕಾತಿಯನ್ನು ರದ್ದುಪಡಿಸಿ, ಸರ್ಕಾರ ಆದೇಶ ಮಾಡಿದ್ದಾಗ ಸುಮಾರು 362 ಅಭ್ಯರ್ಥಿಗಳು ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡಿದ್ದರು. ಆಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದಿದ್ದರು.
ಆದರೆ, ಈಗ ರೆಸಾರ್ಟ್ಗೆ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ಪೇಪರ್ ಕೊಟ್ಟು ಪರೀಕ್ಷೆ ಬರೆಸುತ್ತಿದ್ದಿರಿ. ಅನ್ಯಾಯವಾದಾಗ ಅದರ ಪರ ಧ್ವನಿ ಎತ್ತುವುದು ನಮಗೆ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.