ನ್ಯೂಸ್

ಮಂಡ್ಯ ಧ್ವಜ ವಿವಾದ: ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ!

ಮೋಹನ್​ ಶೆಟ್ಟಿ

ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದಷ್ಟೇ ಮಂಡ್ಯ ಜಿಲ್ಲೆಯ ಕರಗೋಡು ಗ್ರಾಮದಲ್ಲಿ ಅಳವಡಿಸಲಾಗಿದ್ದ ಹನುಮಧ್ವಜ ಸ್ಥಂಭವನ್ನು ತೆರವುಗೊಳಿಸಲಾಗಿತ್ತು. ಈ ವಿವಾದ ತೀವ್ರವಾದ ಬೆನ್ನಲ್ಲೇ ಭಾರೀ ಪ್ರತಿಭಟನೆಗಳು ನಡೆದು, ಜಿಲ್ಲೆಯ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿತ್ತು. ಸದ್ಯ ಬೂದಿ ಮುಚ್ಚಿದ ಕೆಂಡದಂತಾದ ಮಂಡ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ ಬೆನ್ನಲ್ಲೇ ಪರಿಸ್ಥಿತಿಯನ್ನು ಅವಲೋಕಿಸಿ ಇದೀಗ ರಾಜ್ಯ ಸರ್ಕಾರ ಸಾಮಾಜಿಕ ಜಾಲತಾಣದ ಮೇಲೆ ತೀವ್ರ ನಿಗಾ ವಹಿಸಿದೆ.

ರಾಜ್ಯ ಸರ್ಕಾರ ಹೊರಡಿಸಿದ ಪ್ರಕಟಣೆಯ ಪ್ರಕಾರ, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಧ್ವಜ ಸ್ತಂಭದ ವಿಚಾರವು ಸೂಕ್ಷ್ಮ ವಿಚಾರವಾಗಿದ್ದು, ಈ ಸಂಬಂಧ ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಾದ ಎಕ್ಸ್​ X (Twitter), ಫೇಸ್​ಬುಕ್​ (Facebook), ವ್ಯಾಟ್ಸಾಪ್​ (Whatsaap), ಇನ್​ಸ್ಟಾಗ್ರಾಂ (Instagram), ಯೂಟ್ಯೂಬ್​ (Youtube) ಇತ್ಯಾಧಿಗಳಲ್ಲಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗತರುವ ಚಿತ್ರಗಳು, ವಿಡಿಯೋ, ಪ್ರಚೋದನಾಕಾರಿ ಹೇಳಿಕೆಗಳು, ಪೋಸ್ಟರ್‌ಗಳು ಹಾಗೂ ಉದ್ರೇಕಕಾರಿ ಭಾಷಣಗಳನ್ನು ಮಾಡುವಂತಿಲ್ಲ.

ಅಂತಹ ಪ್ರಚೋದನಕಾರಿ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸುವವರ ಹಾಗೂ ಇದಕ್ಕೆ ಪ್ರಚೋದನೆ ನೀಡುವಂತವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವದು. ಸೋಷಿಯಲ್ ಮೀಡಿಯಾದ ಮೇಲೆ ಜಿಲ್ಲಾಡಳಿತವು ತೀವ್ರ ತರವಾದ ನಿಗಾ ಇಟ್ಟಿರುತ್ತದೆ ಎಂದು ತಿಳಿಸಿದೆ.