More

    ಕಾಲೇಜುಗಳಿಗೆ ಮೂಲಸೌಕರ್ಯ, ಉಪನ್ಯಾಸಕರ ಸಮಸ್ಯೆ ನೀಗಿಸಲು ಕ್ರಮ

    ಕೆ.ಆರ್.ಪೇಟೆ : ಸರ್ಕಾರಿ ಕಾಲೇಜುಗಳ ಸಮಸ್ಯೆಗಳನ್ನು ಬಗೆಹರಿಸಲು ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಶಾಸಕ ಎಚ್.ಟಿ.ಮಂಜು ಹೇಳಿದರು.

    ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ತಾಲೂಕು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಾಲೇಜುಗಳ ಮೂಲಸೌಕರ್ಯ, ಉಪನ್ಯಾಸಕರ ಸಮಸ್ಯೆ ಎದುರಾಗದಂತೆ ಸರ್ಕಾರ ಮತ್ತು ಕಾಲೇಜುಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತೇನೆ. ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಗಮನಕ್ಕೆ ತನ್ನಿ, ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸಲು ಉಪನ್ಯಾಸಕರು ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಕಾಲೇಜು ವ್ಯಾಪ್ತಿಯ ಮುಖಂಡರ ಸಹಕಾರ ಪಡೆದುಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದ ಕೂಡಲೇ ಮನೆ ಮನೆಗೆ ಹೋಗಿ ವಿದ್ಯಾರ್ಥಿಗಳು ಹಾಗೂ ಪಾಲಕರ ಮನವೊಲಿಸುವ ಮೂಲಕ ಪಿಯುಸಿ ದಾಖಲಾತಿ ಹೆಚ್ಚಿಸಲು ಮುಂದಾಗಬೇಕು. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

    ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ, ಶ್ರೀರಂಗಪಟ್ಟಣ ಪರಿವರ್ತನ ಸಂಸ್ಥೆಯ ಅಧ್ಯಕ್ಷ ಆರ್.ಎ.ಚೇತನ್‌ರಾಮ್ ಮಾತನಾಡಿ, ಸ್ವಾಮಿ ವಿವೇಕಾನಂದರ ವಾಣಿಯಂತೆ ಮಕ್ಕಳಲ್ಲಿರುವ ಶಕ್ತಿಯನ್ನು ಜಾಗೃತಿಗೊಳಿಸುವುದೇ ಶಿಕ್ಷಣ. ಉಪನ್ಯಾಸಕರು ಮೊದಲು ಉತ್ಸಾಹದಿಂದ ಕಾಲೇಜಿಗೆ ಹೋಗಬೇಕು. ಸಂಬಳಕ್ಕಾಗಿ ಕಾಟಾಚಾರಕ್ಕಾಗಿ ಪಾಠ ಮಾಡಬಾರದು. ದೇಶದ ಸತ್ಪ್ರಜೆಗಳನ್ನು ತಯಾರು ಮಾಡುವ ಒಳ್ಳೆಯ ಅವಕಾಶ ನೀಡಿದ ದೇವರಿಗೆ ನಿತ್ಯವು ನಮಿಸುತ್ತಾ ಮಕ್ಕಳಿಗೆ ಪಾಠ-ಪ್ರವಚನ ಆರಂಭಿಸಬೇಕು. ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಪರೀಕ್ಷೆ ಎಂಬ ಭಯವನ್ನು ಮಕ್ಕಳಿಂದ ಹೋಗಲಾಡಿಸಬೇಕು. ಪರೀಕ್ಷೆಯನ್ನು ಬರೆಯಲು ಬರುವ ಕಾಲೇಜನ್ನು ತಳಿರು, ತೋರಣ ಕಟ್ಟಿ ಸ್ವಾಗತಿಸಬೇಕು. ಶಿಕ್ಷಕರು ಅಥವಾ ಉಪನ್ಯಾಸಕರಿಗೆ ಮಕ್ಕಳೇ ಅನ್ನದಾತರಾಗಿದ್ದಾರೆ. ಹಾಗಾಗಿ ಆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

    ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಮೂಲಕ ಉಪನ್ಯಾಸಕರು ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸದಾ ನಮ್ಮ ಬೆಂಬಲಕ್ಕೆ ನಿಂತಿರುವ ಶಿಕ್ಷಕರು ಹಾಗೂ ಉಪನ್ಯಾಸಕರ ಸಮಸ್ಯೆಗಳನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ತಂದು ಪರಿಹಾರ ರೂಪಿಸಲು ಶ್ರಮಿಸುವುದಾಗಿ ತಿಳಿಸಿದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಆರ್‌ಟಿಒ ಅಧಿಕಾರಿ ಮಲ್ಲಿಕಾರ್ಜುನ್, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಎಸ್.ಎಲ್.ಮೋಹನ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಂ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ನಿವೃತ್ತ ಉಪನ್ಯಾಸಕರಾದ ಎಂ.ಕೆ.ಹರಿಚರಣತಿಲಕ್, ಕೆ.ಎಸ್.ಸೋಮಶೇಖರ್ ಮತ್ತಿತರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts