ಮುಂಬೈ: ಇತ್ತೀಚೆಗಷ್ಟೇ ಗುಜರಾತ್ನಲ್ಲಿ ಖಾಸಗಿ ಸಂಸ್ಥೆಯೊಂದು ತಮ್ಮಲ್ಲಿ ಖಾಲಿಯಿದ್ದ ಐದು ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಈ ವೇಳೆ ಐದೇ 5 ಹುದ್ದೆಗೆ ಆಗಮಿಸಿದ್ದು 1000ಕ್ಕೂ ಹೆಚ್ಚು ಅರ್ಜಿದಾರರು. ಕಛೇರಿಯ ಮುಂಭಾಗ ಜಮಾಯಿಸಿದ್ದ ಅಭ್ಯರ್ಥಿಗಳನ್ನು ತಡೆಯುವಲ್ಲಿ ಸಂಸ್ಥೆಯ ಸಿಬ್ಬಂದಿಗಳು ವಿಫಲರಾಗಿದ್ದರು. ಯುವಕರ ನೂಕುನುಗ್ಗಲಿನಿಂದ ಹೋಟೆಲ್ ಹೊರೆಗೆ ಅಳವಡಿಸಲಾಗಿದ್ದ ರೇಲಿಂಗ್ ಮುರಿದುಬಿದ್ದಿತ್ತು. ಆ ಮಟ್ಟಿಗೆ ಯುವಕರು ತಳ್ಳಾಡಿದ್ದರು. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು.
ಈಗ ಅದೇ ರೀತಿಯ ಘಟನೆ ಮುಂಬೈನಲ್ಲಿಯೂ ಸಂಭವಿಸಿದ್ದು, ಮಾಯನಗರಿಯಲ್ಲಿನ ಏರ್ ಇಂಡಿಯಾ ಸರ್ವೀಸ್ ಲಿಮಿಟೆಡ್ ಸಂಸ್ಥೆ ತಮ್ಮಲ್ಲಿ ಖಾಲಿಯಿದ್ದ 2,216 ಹುದ್ದೆಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಸಂಬಳ 20,000-25,000 ರೂ. ಇರಲಿದೆ. ಜತೆಗೆ ನೇರ ಸಂದರ್ಶನಕ್ಕೆ ಬರಬಹುದು ಎಂದು ಪ್ರಕಟಣೆ ಹೊರಡಿಸಿತ್ತು. ಹೀಗೆ ಹೇಳುತ್ತಿದ್ದಂತೆ ಕಂಪೆನಿಯ ಮುಂದೆ 25,000ಕ್ಕೂ ಅಧಿಕ ಅಭ್ಯರ್ಥಿಗಳು ಜಮಾಯಿಸಿ, ಕಾಲ್ತುಳಿತಕ್ಕೆ ಕಾರಣವಾಗಿದ್ದಾರೆ.
ಕಂಪೆನಿಯಲ್ಲಿ ವಿವಿಧ ಕೆಲಸಗಳಿಗೆ ಸಂಬಂಧಿಸಿದಂತೆ ಹುದ್ದೆಗಳು ಖಾಲಿಯಾಗಿತ್ತು. ಇದನ್ನು ಭರ್ತಿಗೊಳಿಸುವ ಸಲುವಾಗಿ ಸಂಸ್ಥೆ ಆಸಕ್ತರನ್ನು ಗಮನದಲ್ಲಿಟ್ಟುಕೊಂಡು ನೇರ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿತ್ತು. ಕಲ್ಪನೆಗೂ ಮೀರಿದಷ್ಟು ಅರ್ಜಿದಾರರು ಕೆಲಸ ಗಿಟ್ಟಿಸಿಕೊಳ್ಳಲು ಸಂಸ್ಥೆಯ ಮುಂದೆ ಜಮಾಯಿಸಿದ್ದನ್ನು ಕಂಡು ಮಾಲೀಕರು ಗಲಿಬಿಲಿಗೊಂಡಿದ್ದಾರೆ. 2,216 ಹುದ್ದೆಗಳಲ್ಲಿ ನನಗೊಂದು ಸಿಕ್ಕರೆ ಸಾಕಪ್ಪ ಎಂದು ನೂಕುನುಗ್ಗಲಿನಲ್ಲಿ ತೊಡಗಿದ್ದ ಯುವಕರು ಕಾಲ್ತುಳಿತ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಸದ್ಯದ ಮಟ್ಟಿಗೆ ಘಟನೆಯಲ್ಲಿ ಯಾವ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೇದಾರನಾಥದಲ್ಲಿ 228ಕೆಜಿ ಚಿನ್ನ ನಾಪತ್ತೆ ಪ್ರಕರಣ..ಕಾಂಗ್ರೆಸ್ ಪರ ಶಂಕರಾಚಾರ್ಯ ಎಂದಿದ್ದೇಕೆ ದೇಗುಲ ಸಮಿತಿ!
ಅಸಲಿಗೆ ಸಂಸ್ಥೆ ನಮ್ಮಲ್ಲಿ ಕೆಲವೇ ಕೆಲವು ಹುದ್ದೆಗಳು ಖಾಲಿ ಉಳಿದಿವೆ. ಆಸಕ್ತ ಅಭ್ಯರ್ಥಿಗಳು ತಮ್ಮ ತಮ್ಮ ರೆಸ್ಯೂಮ್‌ಗಳನ್ನು ಕೊಟ್ಟು ಮನೆಗೆ ಹಿಂತಿರುಗಿ, ನಮ್ಮ ಮುಂದಿನ ಉತ್ತರಕ್ಕೆ ನಿರೀಕ್ಷಿಸಿ ಎಂದು ಮೊದಲೇ ಸ್ಪಷ್ಟವಾಗಿ ತಿಳಿಸಿತ್ತು. ಆದ್ರೆ, ಇದ್ಯಾವುದಕ್ಕೂ ಒಪ್ಪದ ಅಭ್ಯರ್ಥಿಗಳ ಸಾಗರ, ನಮಗೆ ಕೆಲಸ ಬೇಕೇ ಬೇಕು ಎಂದು ಪಟ್ಟುಹಿಡಿದು ಕೆಲ ಸಮಯ ರಸ್ತೆ ಸಂಚಾರಕ್ಕೆ ತೊಡಕು ಉಂಟುಮಾಡಿದ್ದಾರೆ. ಈ ಘಟನೆಯಲ್ಲಿ ಒಂದಂತೂ ಸ್ಪಷ್ಟವಾಗಿ ಕಾಣುತ್ತಿರುವುದು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟರ ಮಟ್ಟಿಗೆ ಕಾಡುತ್ತಿದೆ ಎಂಬುದು. ಇಷ್ಟೆಲ್ಲಾ ಗಲಿಬಿಲಿ ನಡುವೆಯೂ ಸಂಸ್ಥೆ ಎಲ್ಲರ ರೆಸ್ಯೂಮ್‌ಗಳನ್ನು ಪರಿಶೀಲಿಸುವುದಾಗಿ ಮತ್ತು ಮುಂದಿನ ಹಂತಗಳಿಗಾಗಿ ಅರ್ಹ ಅಭ್ಯರ್ಥಿಗಳನ್ನು ಸಂಪರ್ಕಿಸುವುದಾಗಿ ಭರವಸೆ ನೀಡಿದೆ,(ಏಜೆನ್ಸೀಸ್).