ದಲಿತ ಸಮುದಾಯದ ವಿರೋಧಿ ರಾಜ್ಯಸರ್ಕಾರ: ಮಾಜಿ ಸಚಿವ ಎನ್.ಮಹೇಶ್ ಟೀಕೆ

Former minister criticism against the state government Mandya
Published on

ಮಂಡ್ಯ: ರಾಜ್ಯದಲ್ಲಿ ದಲಿತ, ಸಂವಿಧಾನ ವಿರೋಧಿ ಹಾಗೂ ಹಗರಣಗಳ ಸರ್ಕಾರವಿದೆ. ಪ್ರಮುಖವಾಗಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕಾಗಿ ದಲಿತರಿಗೆ ಮೀಸಲಾದ ಹಣವನ್ನು ವಿನಿಯೋಗಿಸುತ್ತಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಟೀಕಿಸಿದರು.

ರಾಜ್ಯದ ಸಂಪನ್ಮೂಲವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತದೆಂದು ನಾವು ತಿಳಿದುಕೊಂಡಿದ್ದೆವು. ಆದರೆ ಎಸ್ಸಿ ಮತ್ತು ಎಸ್ಟಿಗಳ ಅಭಿವೃದ್ಧಿಗೆ ಮೀಸಲಾದ ಹಣವನ್ನು ಬಳಸುವ ಮೂಲಕ ಸಮುದಾಯವನ್ನು ವಂಚಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

2023-24ನೇ ಸಾಲಿನಲ್ಲಿ 11,144 ಕೋಟಿ ರೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ. 2024-25ನೇ ಸಾಲಿನಲ್ಲಿ ಮೀಸಲಿಟ್ಟಿದ್ದ 39 ಸಾವಿರ ಕೋಟಿ ರೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ 14,563 ಕೋಟಿ ರೂ.ಗಳನ್ನು ಅಕ್ರಮವಾಗಿ ಬಳಸಿಕೊಂಡಿದೆ. ಒಟ್ಟಾರೆ ಕಳೆದೆರಡು ವರ್ಷಗಳಲ್ಲಿ 25 ಸಾವಿರ ಕೋಟಿ ರೂ.ಗೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗಳಿಗೆ ವಿನಿಯೋಗಿಸಿದೆ ಎಂದು ವಿವರಿಸಿದರು.

ಎಸ್ಸಿ ಮತ್ತು ಎಸ್ಟಿ ಅಭಿವೃದ್ಧಿಗೆ ಮೀಸಲಾದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿರುವುದು ಸಂವಿಧಾನ ಮತ್ತು ದಲಿತರ ವಿರೋಧಿ ನೀತಿಯಾಗಿದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಲ್ಲಿನ 7ಡಿ ಸೆಕ್ಷನ್‌ನ್ನು ಹೋರಾಟದ ಬಳಿಕ ತೆಗೆಯಲಾಗಿದೆ. ಆದರೆ, ಸೆಕ್ಷನ್ 7ಸಿ ಅನ್ನು ತೋರಿಸಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸುವ ಬುದ್ಧಿವಂತಿಕೆಯನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಖಂಡನೀಯ. ಜತೆಗೆ, ಸೆಕ್ಷನ್ 7ಸಿ ಅನ್ನು ಕೂಡ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರ ಕಾರ್ಯಚಟುವಟಿಕೆಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಸಿಕೊಳ್ಳಲು ವಿನಾಯಿತಿ ನೀಡಲಾಗಿದೆ. ಆದರೆ, ಇದರ ವ್ಯಾಪ್ತಿಗೆ ಗ್ಯಾರಂಟಿ ಕಾರ್ಯಕ್ರಮಗಳು ಬರುವುದಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರನ್ನು ದಾರಿತಪ್ಪಿಸುವ ಮೂಲಕ ವಂಚಿಸುತ್ತಿದ್ದಾರೆ. ಎಸ್ಸಿ ಮತ್ತು ಎಸ್ಸಿ ವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 7 ನಿಗಮಗಳಿವೆ. ಆದರೆ, ಈ ನಿಗಮಗಳಿಗೂ ಅಗತ್ಯ ಅನುದಾನ ನೀಡುತ್ತಿಲ್ಲ. 2023-24ರಲ್ಲಿ 7 ನಿಗಮಗಳಿಗೆ ಕೇವಲ 510 ಕೋಟಿ ರೂ ನೀಡಲಾಗಿದೆ. ಈ ವರ್ಷವೂ ಕೂಡ ಅಷ್ಟೇ ಅನುದಾನ ಮೀಸಲಿಡಲಾಗಿದೆ. ಮತ್ತೊಂದೆಡೆ ದಲಿತರ ಅಭ್ಯುದಯಕ್ಕಾಗಿ ಇರುವ ಭೂಒಡೆತನ ಯೋಜನೆಯಡಿ ಕಳೆದರಡು ವರ್ಷಗಳಿಂದ ದಲಿತರಿಗೆ ಒಂದು ಅಡಿ ಭೂಮಿಯನ್ನೂ ಕೊಟ್ಟಿಲ್ಲ. ಹಿಂದಿನ ವರ್ಷಗಳ 1,169 ಕೋಟಿ ರೂ. ಬಾಕಿ ಮೊತ್ತವನ್ನು ಪಾವತಿಸಬೇಕಿದೆ. ಜತೆಗೆ, ಗಂಗಾ ಕಲ್ಯಾಣ ಯೋಜನೆಯಡಿ ಕಾಮಗಾರಿಗಳಿಗೆ 650 ಕೋಟಿ ರೂ ಬಾಕಿ ನೀಡಬೇಕಿದೆ ಎಂದು ವಿವರಿಸಿದರು.

ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನವನ್ನೂ ಸರಿಯಾಗಿ ಕೊಡುತ್ತಿಲ್ಲ. ಮತ್ತೊಂದೆಡೆ ಹಗರಣಗಳ ಮೇಲೆ ಹಗರಣಗಳು ಹೊರ ಬರುತ್ತಿವೆ. ವಾಲ್ಮೀಕಿ ನಿಗಮ, ಮುಡಾ ಹಗರಣದ ಬೆನ್ನಲ್ಲೇ ವಕ್ಫ್ ಬೋರ್ಡ್, ಕಾರ್ಮಿಕ ಇಲಾಖೆಯಲ್ಲೂ ಹಗರಣ ನಡೆದಿರುವ ಮಾತುಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ನಿಯಂತ್ರಣವಿಲ್ಲ ಎಂದು ಕಿಡಿಕಾರಿದರು.

ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಬಿಜೆಪಿ ಮುಖಂಡರಾದ ಪರಮಾನಂದ, ಟಿ.ಜಿ.ಶಂಕರ್, ವಸಂತಕುಮಾರ್, ನರಸಿಂಹಾಚಾರ್, ಸಿ.ಟಿ.ಮಂಜುನಾಥ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net